ಬೆಳಗಾವಿ/ಬೆಂಗಳೂರು: ಮಂಗಳೂರಿನ ಸುರತ್ಕಲ್ ಬಳಿ ವ್ಯಾಪಾರಿ ಅಬ್ದುಲ್ ಜಲೀಲ್ ಕೊಲೆ ಪ್ರಕರಣ ವಿಧಾನಸಭೆಯಲ್ಲಿ ಇಂದು ಚರ್ಚೆಗೆ ಗ್ರಾಸವಾಯಿತು. ವಿಧಾನಸಭೆಯ ಉಪ ನಾಯಕ ಯು.ಟಿ.ಖಾದರ್ ಅವರು ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, ಅನಾವಶ್ಯಕವಾಗಿ ನಡೆದ ಗಲಾಟೆಗೆ ತಕ್ಷಣ ಸರ್ಕಾರ ಕ್ರಮ ತೆಗೆದುಕೊಂಡಿದ್ದರೆ, ಅಲ್ಲಿ ಒಂದು ಕೊಲೆ ಆಗುತ್ತಿರಲಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಈ ವೇಳೆ, ಮಧ್ಯ ಪ್ರವೇಶಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಿ ಕೊಲೆ ಹಾಗೂ ಶಾಂತಿಸುವ್ಯವಸ್ಥೆಗೆ ಧಕ್ಕೆ ತರುವ ಆರೋಪಿಗಳ ವಿರುದ್ಧ ಅಪರಾಧ ನಿಯಂತ್ರಣ ಮುಂಜಾಗ್ರತಾ ಕಾಯ್ದೆ(ಯುಎಪಿಎ)ಯಡಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಕರಾವಳಿ ಹಾಗೂ ಬೇರೆ ಬೇರೆ ಕಡೆ ಇಂತಹ ಘಟನೆಗಳು ನಡೆಯುತ್ತಿರುವುದು ಅಪಾಯಕಾರಿ ಬೆಳವಣಿಗೆ. ಕೃತ್ಯದಲ್ಲಿ ಭಾಗಿಯಾಗುವ ಆರೋಪಿಗಳನ್ನು ಯುಎಪಿಎ ಕಾಯ್ದೆಯಡಿ ಬಂಧಿಸಬೇಕು ಎಂದು ಒತ್ತಾಯಿಸಿದರು. ಮುಖ್ಯಮಂತ್ರಿಗಳ ಇತ್ತೀಚಿನ ಹೇಳಿಕೆಗಳು ಇಂತಹ ಕೋಮುಗಲಭೆಗೆ ಕಾರಣವಾಗುತ್ತದೆ. ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಎಂದರೆ ಹೇಗೆ? ಕೊಲೆ ಮಾಡಿದವರು ಇನ್ನೊಂದು ಕೊಲೆ ಮಾಡಬೇಕು ಎಂಬುದು ಇವರ ಹೇಳಿಕೆಯೇ? ಇಂತಹ ಹೇಳಿಕೆಗಳಿಂದ ಕೋಮುಸೌಹಾರ್ದ ಮೂಡುವ ಬದಲು ದ್ವೇಷದ ವಾತಾವರಣ ಮೂಡುತ್ತದೆ ಎಂದು ಕಿಡಿಕಾರಿದರು.
ಸೂರತ್ಕಲ್‍ನಲ್ಲಿ ಘಟನೆ ನಡೆದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಲ್ಲಿಯೇ ಇದ್ದರು. ಕಡೆಪಕ್ಷ ಸಂತ್ರಸ್ತರ ಮನೆಗೆ ಭೇಟಿ ಕೊಟ್ಟಿದ್ದರೆ ಪರಿಸ್ಥಿತಿ ಶಾಂತಮಯವಾಗುತ್ತಿತ್ತು. ಆದರೆ, ಪ್ರತಿಯೊಂದು ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ ಎಂದು ಹೇಳುತ್ತಿದ್ದಾರೆ ಎಂದರು. ಮಂಗಳೂರು, ಶಿವಮೊಗ್ಗದಲ್ಲಿ ಘಟನೆಗಳು ನಡೆದಾಗ ಸಿಎಂ, ಸಚಿವರು ಸೇರಿದಂತೆ ಹಲವು ನಾಯಕರು ಭೇಟಿ ಕೊಟ್ಟು ಸಾಂತ್ವನ ಹೇಳಿದ್ದಲ್ಲದೇ ಅವರಿಗೆ ಪರಿಹಾರವನ್ನು ಕೊಟ್ಟಿದ್ದೀರಿ. ಅದೇ ಪರಿಹಾರ ಇವರಿಗೇಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.