ಬೆಳಗಾವಿ: ಮಳೆ ಮತ್ತು ಪ್ರವಾಹದಿಂದ ಉಂಟಾದ ಹಾನಿ ಪ್ರದೇಶಗಳ ಪರಿಹಾರ ವೀಕ್ಷಣೆಗಾಗಿ ಕೇಂದ್ರದಿಂದ ನೆರೆ ಅಧ್ಯಯನ ತಂಡ ಜಿಲ್ಲೆಗೆ ಆಗಮಿಸಿದ್ದು, ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ.
ಈ ಕೇಂದ್ರ ನೆರೆ ಅಧ್ಯಯನ ತಂಡ ಇಂದು ಮತ್ತು ನಾಳೆ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಹಾನಿ ಪರಿಶೀಲನೆ ನಡೆಸಲಿದ್ದಾರೆ.
ಬೆಳಗಾವಿಗೆ ಭೇಟಿ ನೀಡಿದ ಕೇಂದ್ರ ನೆರೆ ಅಧ್ಯಯನ ತಂಡ ಇಂದು ಖಾನಾಪುರ, ಬೆಳಗಾವಿ, ಹುಕ್ಕೇರಿ, ಗೋಕಾಕ್ ತಾಲೂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ನಾಳೆ ಅಥಣಿ, ಕಾಗವಾಡ, ಚಿಕ್ಕೋಡಿ, ನಿಪ್ಪಾಣಿ ತಾಲೂಕಿಗೆ ಭೇಟಿ ನೀಡಲಿದೆ.
ನೆರೆ ಪರಿಹಾರ ಪರಿಶೀಲನೆ ಸಂದರ್ಭದಲ್ಲಿ ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಕೃಷ್ಣಾ ಸೇರಿದಂತೆ ಸಪ್ತ ನದಿಗಳಿಂದ ಆಗಿರುವ ಹಾನಿ ಬಗ್ಗೆಯೂ ಹಾಗೂ ಪ್ರಮುಖ ಸೇತುವೆಗಳು, ರಸ್ತೆ, ಶಾಲೆಗಳು, ಮನೆ ಹಾನಿಯಾದ ಪ್ರದೇಶಕ್ಕೆ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.