ಬೆಳಗಾವಿ:ಜಿಲ್ಲೆಯಿಂದ ಮಹಾರಾಷ್ಟ್ರ, ಗೋವಾ, ಹೈದರಾಬಾದ್ ಹಾಗೂ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ನಿದ್ರೆ ಮಾತ್ರೆ ನೀಡಿ ಚಿನ್ನ, ನಗದು, ಸೇರಿದಂತೆ ಬ್ಯಾಗ್ಗಳನ್ನು ದರೋಡೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿಹಾರ ಮೂಲದ ಮಹಮ್ಮದ್ ಅನ್ವರುಲ್(21), ಸಾದಾಬ್ ಲಲಿಯಾ (35) ಹಾಗೂ ಆನ್ವರ್ ಆಲಮ್ ಕಲಿವುಂದ್ಧಿನ್ (25) ಬಂಧಿತ ಆರೋಪಿಗಳು.
ಈ ಮೂವರು ಬಹುದಿನಗಳಿಂದ ಬೆಳಗಾವಿ, ಬೆಂಗಳೂರು, ಗೋವಾ ಮಾರ್ಗವಾಗಿ ಸಾಗುತ್ತಿರುವ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರೊಂದಿಗೆ ಸ್ನೇಹ ಬೆಳೆಸಿಕೊಳ್ಳುತ್ತಿದ್ದರು. ಪ್ರಯಾಣಿಕರು ಹತ್ತಿರವಾದಂತೆ ಅವರಿಗೆ ತಂಪು ಪಾನೀಯಗಳಲ್ಲಿ ನಿದ್ರೆ ಮಾತ್ರೆ, ಸಮೋಸಾ, ಚಾಕೊಲೇಟ್ ನೀಡುತ್ತಾರೆ. ಇವುಗಳನ್ನು ತಿಂದು ಕುಡಿದು ನಿದ್ರೆಗೆ ಜಾರಿದ ಕ್ಷಣಾರ್ಧದಲ್ಲಿ ಈ ಕೃತ್ಯ ಎಸಗುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಶುಕ್ರವಾರ ಸಕೇಂದರ ಚೌಧರಿ ಕುಟುಂಬ ಸದಸ್ಯರು ಜಬಲಪೂರ ರೈಲಿನಲ್ಲಿ ಸಂಚಾರಿಸುವಾಗ ಇದೇ ರೀತಿ ಈ ಮೂವರು ಆರೋಪಿಗಳು ಸ್ನೇಹ ಬೆಳೆಸಿಕೊಂಡು ನಂತರ ಸಮೋಸಾ, ಚಾಕೊಲೇಟ್ ನೀಡಿದ್ದು, ಪ್ರಜ್ಞೆ ತಪ್ಪಿದ ಬಳಿಕ ಮೈಮೇಲಿನ ಬಂಗಾರದ ಆಭರಣಗಳು, ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ದೋಚಿದ್ದರು.
ಈ ಕುರಿತು ಬೆಳಗಾವಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಕಳ್ಳತನ ಎಸಗಿ ಕಣ್ಮರೆಯಾಗಿಬೇಕಿದ್ದ ಆರೋಪಿಗಳು ಕೊರೊನಾ ಭೀತಿಯಿಂದ ನಗರದಲ್ಲಿ ಉಳಿದುಕೊಂಡಿದ್ದರು. ಈ ವೇಳೆ ರೈಲ್ವೆ ನಿಲ್ದಾಣದಲ್ಲಿ ಅಪರಿಚತವಾಗಿ ಅಲೆದಾಡುತ್ತಿದ್ದುದನ್ನು ಶಂಕಿಸಿದ ಪೊಲೀಸರು ಆರೋಪಿಗಳನ್ನು ಹಿಡಿದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.