ಬೆಳಗಾವಿ:ಪ್ರಸಕ್ತ ವರ್ಷಕ್ಕೆ ಸೀಮಿತವಾಗುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ದ್ವಿತೀಯ ಪಿಯು ಪರೀಕ್ಷೆಗೆ ಬಹು ಆಯ್ಕೆ ಪ್ರಶ್ನೆಗಳ ಸಂಖ್ಯೆ ಹೆಚ್ಚಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯು ಪರೀಕ್ಷೆ ಏ. 22ರಿಂದ ಮೇ 18ರವರೆಗೆ ಪರೀಕ್ಷೆ ನಡೆಯಲಿದೆ. ಪಿಯು ಶಿಕ್ಷಣ ಇಲಾಖೆ ಪರೀಕ್ಷೆಗೆ ಅಗತ್ಯ ಸಿದ್ಧತೆಯನ್ನು ಮಾಡಿಕೊಂಡಿದೆ.
ಕೋವಿಡ್ ಕಾರಣಕ್ಕೆ ಕಳೆದ ವರ್ಷ ಪರೀಕ್ಷೆ ಇಲ್ಲದೆಯೇ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ. ಆದರೆ ಈ ವರ್ಷ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ವಿದ್ಯಾಥಿಗಳಿಗೆ ಸರಳ ಆಗುವಂತೆ ಪ್ರಶ್ನೆ ಪತ್ರಿಕೆಯನ್ನು ರಚಿಸಲಾಗಿದೆ. ಒಂದು ಅಂಕ ಬಹುಆಯ್ಕೆಯ ಪ್ರಶ್ನೆಗಳು ಈ ಬಾರಿ ಹೆಚ್ಚು ನೀಡಲಾಗಿದೆ.
ಕೋವಿಡ್ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಈ ವರ್ಷ ಶೈಕ್ಷಣಿಕ ದಿನಗಳು ಕಡಿಮೆ ಮಾಡಲಾಗಿದೆ. ಆದರೆ ಈ ಬಾರಿ ಪರೀಕ್ಷೆಯನ್ನು ಎಲ್ಲರೂ ಬರೆಯ ಬೇಕಿದೆ. ಆದರೆ ಪ್ರಶ್ನೆ ಪತ್ರಿಕೆಯಲ್ಲಿ ಕೆಲವು ಸರಳ ಬದಲಾವಣೆ ಮಾಡಲಾಗಿದೆ. ಇದು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಸರಳ ಮಾಡಲಿದೆ.
ದ್ವಿತೀಯ ಪಿಯು ಪರೀಕ್ಷೆಗೆ ದಿನಗಣನೆ ಹೀಗಿರಲಿದೆ ಪ್ರಶ್ನೆ ಪತ್ರಿಕೆ!:ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಪ್ರತಿ ಪತ್ರಿಕೆಯನ್ನು ಸುಲಭ ಮಾದರಿಯಲ್ಲಿ ರೂಪಿಸಲಾಗುತ್ತಿದೆ. 1 ಅಂಕದ ಪ್ರಶ್ನೆಗಳನ್ನು 10ಕ್ಕೆ ಹೆಚ್ಚಿಸಲಾಗಿದೆ. ಒಂದು ಅಂಕದ ಪ್ರಶ್ನೆಗಳನ್ನು ಹೆಚ್ಚಿಸಿದ್ದು ಮತ್ತು ಪ್ರಶ್ನೆಗಳಿಗೆ ಬಹು ಆಯ್ಕೆ ನೀಡಿರುವುದು ಇನ್ನಷ್ಟು ಸರಳವಾಗಿದೆ.
ಮೊದಲು ವಿಜ್ಞಾನ ವಿಷಯದಲ್ಲಿ ಒಂದು ಪ್ರಶ್ನೆ ಪತ್ರಿಕೆಯಲ್ಲಿ 105 ಪ್ರಶ್ನೆಗಳು ಇರುತ್ತಿದ್ದವು. ಈ ಬಾರಿಯಿಂದ 140 ಪ್ರಶ್ನೆಗಳಿರಲಿದೆ. ಆದರೆ, ವಿದ್ಯಾರ್ಥಿಗಳು 70 ಅಂಕಗಳಿಗೆ ಉತ್ತರಿಸಬೇಕಿದೆ. ಈ ಮೊದಲು ಕಲಾ ಹಾಗೂ ವಾಣಿಜ್ಯ ವಿಭಾಗದ ಪತ್ರಿಕೆಗಳಿಗೆ ಈ ಮೊದಲು 140 ಪ್ರಶ್ನೆಗಳಿರುತ್ತಿದ್ದವು, ಈ ಸಲ 167 ಕ್ಕೆ ಹೆಚ್ಚಿಸಲಾಗಿದೆ. 100 ಅಂಕಗಳಿಗಷ್ಟೇ ಉತ್ತರಿಸಬೇಕಿದೆ.
ಕಡಿಮೆ ಓದಿದ್ದರೂ ಹೆಚ್ಚಿನ ಅಂಕ ಪಕ್ಕಾ:ಬಹುಆಯ್ಕೆ ಪ್ರಶ್ನೆಗಳ ಸಂಖ್ಯೆ ಹೆಚ್ಚಾಗಿರುವ ಕಾರಣಕ್ಕೆ ಶೇಕಡಾ 50-60 ರಷ್ಟು ಪಠ್ಯ ಓದಿದರೂ ಶೇ. 75 ರಷ್ಟು ಅಂಕ ಪಡೆಯಬಹುದು. ಈ ಮೊದಲು ಡಿಸ್ಟಿಂಕ್ಷನ್‌ಷ್ಟು ಅಂಕ ಪಡೆಯಲು ಕನಿಷ್ಠ ಶೇ. 80 ರಷ್ಟು ಪಠ್ಯ ಓದಬೇಕಿತ್ತು. ಆದರೆ ಈಗ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಪ್ರಶ್ನೆ ಪತ್ರಿಕೆ ರೂಪಿಸಲಾಗುತ್ತಿದ್ದು, ಡಿಸ್ಟಿಂಕ್ಷನ್‌ನಲ್ಲಿ ಪಾಸ್ ಆಗುವುದು ಸುಲಭವಾಗಿದೆ. ಪ್ರಶ್ನೆ ಪತ್ರಿಕೆಯ ಈ ಹೊಸ ನಿಯಮ ಈ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಇರಲಿದೆ ಎಂದು ಬೆಳಗಾವಿ ಡಿಡಿಪಿಯು ವಿ. ನಾಗರಾಜ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಪ್ರತ್ಯೇಕ ಕೊಠಡಿ:ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಈ ವರ್ಷ ಕಲಾ ವಿಭಾಗದಲ್ಲಿ ಒಟ್ಟು 24610, ವಾಣಿಜ್ಯ ವಿಭಾಗದಲ್ಲಿ ಒಟ್ಟು 14906 ಹಾಗೂ ವಿಜ್ಞಾನ ವಿಭಾಗದಲ್ಲಿ 12337 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ರಾಜ್ಯ ಸರ್ಕಾರದ ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಪರೀಕ್ಷೆ ನಡೆಸಲಾಗುತ್ತಿದೆ. ಕೋವಿಡ್ ಸೋಂಕಿತ ಹಾಗೂ ಕೋವಿಡ್ ಲಕ್ಷಣಗಳಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ:ದಲಿತ ವಿದ್ಯಾರ್ಥಿಗೆ ಬೆಲ್ಟ್, ಕೇಬಲ್ನಿಂದ ಥಳಿಸಿ, ಕಾಲು ನೆಕ್ಕಿಸಿದರು! ವಿಡಿಯೋ