ಬೆಳಗಾವಿ:ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಡಿಸೆಂಬರ್ 19ರೊಳಗೆ 2ಎ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನವೆಂಬರ್ 24ರಂದೇ ಮಾತು ಕೊಟ್ಟಿದ್ದರು. ಅವರ ಮಾತಿನ ಮೇಲೆ ಭರವಸೆ ಇಟ್ಟುಕೊಂಡಿದ್ದೇವೆ. ಸರ್ಕಾರಕ್ಕೆ ನೆನಪಿಸಲು ಇಂದು ರಾಜ್ಯ ಕಾರ್ಯಕಾರಿಣಿ ಸಭೆ ಮಾಡುತ್ತಿದ್ದೇವೆ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಈಗಾಗಲೇ ಸಭೆ ಆಗಿದೆ. ಡಿ.19ರೊಳಗೆ ಮೀಸಲಾತಿ ಘೋಷಿಸಬೇಕು ಎಂದು ಹಕ್ಕೊತ್ತಾಯ ಮಾಡಲಾಗಿದೆ. ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಡಿಸೆಂಬರ್ 22ರಂದು ಬೆಳಗಾವಿಯ ವಿಕಾಸಸೌಧದ ಮುಂದೆ 25 ಲಕ್ಷ ಪಂಚಮಸಾಲಿಗಳನ್ನು ಸೇರಿಸಲಾಗುವುದು ಎಂದಿದ್ದಾರೆ.
ಒಂದು ವೇಳೆ, ಡಿ.19ರಂದು ಮೀಸಲಾತಿ ಘೋಷಣೆ ಮಾಡಿದರೆ ಡಿ.22ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸನ್ಮಾನ ಮಾಡಲಾಗುತ್ತದೆ. ಮಾಡದಿದ್ದರೆ ಈ ಮೊದಲ ಹೇಳಿದಂತೆ ವಿರಾಟ್ ಪಂಚಶಕ್ತಿ ಸಮಾವೇಶ ಹಾಗೂ ವಿಕಾಸಸೌಧಕ್ಕೆ ಮುತ್ತಿಗೆ ನಡೆಸಲಾಗುವುದು. ಅದೇ ವೇದಿಕೆಯಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು. ಹಾಗಾಗಿ ಇತಿಹಾಸ ನಿರ್ಮಿಸುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದರು.