ಬೆಳಗಾವಿ:ಬೆಳಗಾವಿ ಸಿಇಎನ್ ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 20 ಲಕ್ಷ ಮೌಲ್ಯದ 1.15 ಕೆ.ಜಿ ಅಫೀಮನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್, ಪಾನ್‌ಶಾಪ್‌ನಲ್ಲಿ ಅಫೀಮು ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡಲಾಗುತ್ತಿತ್ತು. ಸಿಇಎನ್ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಆರ್. ಗಡ್ಡೇಕರ ನೇತೃತ್ವದ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ್ದಾರೆ. ಅಫೀಮು ಮಾರಾಟ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ಘಟನೆ ಬಗ್ಗೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ರಾಷ್ಟ್ರೀಯ ಹೆದ್ದಾರಿ 4ರ ಪಕ್ಕದ ರಾಜಸ್ಥಾನ ದಾಬಾ ಬಳಿಯ ಪಾನ್‌ಶಾಪ್‌ನಲ್ಲಿ ಅಫೀಮು ಮಾರಾಟ ಮಾಡಲಾಗುತ್ತಿತ್ತು. ದಾಳಿ ವೇಳೆ 20 ಲಕ್ಷ ರೂಪಾಯಿ ಮೌಲ್ಯದ 1 ಕೆಜಿ 150 ಗ್ರಾಂ ಅಫೀಮನ್ನು ಜಪ್ತಿ ಮಾಡಲಾಗಿದೆ. ರಾಜಸ್ಥಾನ ಮೂಲದ ಬೆಳಗಾವಿ ನಿವಾಸಿಗಳಾದ ಬರಖತ್‌ಖಾನ್, ಕಮಲೇಶ್ ಬೇನಿವಾಲಾ, ಸರವನ್ ಅಸನೋಯಿ ಬಂಧಿತ ಆರೋಪಿತರಾಗಿದ್ದಾರೆ.
ರಾಜಸ್ಥಾನ ಮೂಲದ ಮಾರ್ವಾಡಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಆರೋಪಿಗಳು ಅಫೀಮನ್ನು ಸಪ್ಲೈ ಮಾಡುತ್ತಿದ್ದ ಬಗ್ಗೆ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಲಾರಿಗಳ ಮೂಲಕ ಈ ಗ್ಯಾಂಗ್ ರಾಜಸ್ಥಾನದಿಂದ ಬೆಳಗಾವಿಗೆ ಅಫೀಮು ತರುತ್ತಿದ್ದರು ಎಂಬ ಶಂಕೆಯಿದೆ. ಈ ಬಗ್ಗೆ ಇನ್ನೂ ತನಿಖೆ ಪ್ರಗತಿಯಲ್ಲಿದೆ. ಪ್ರಕರಣದ ಜಾಲ ಬೇಧಿಸಲಾಗುತ್ತಿದೆ. ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಘಟನೆ ಬಗ್ಗೆ ನಗರ ಪೊಲೀಸ್ ಆಯುಕ್ತರಾದ ಕೆ.ತ್ಯಾಗರಾಜನ್ ಹೇಳಿದರು.