ಚಿಕ್ಕೋಡಿ:ರಾಜ್ಯದ ಕಟ್ಟಕಡೆಯ ತಾಲೂಕು ಕಾಗವಾಡ. ಇಲ್ಲಿಂದ ನಾಲ್ಕೈದು ಕಿ.ಮೀ ಪ್ರಯಾಣಿಸಿದರೆ ಸಾಕು ಮಹಾರಾಷ್ಟ್ರ ಶುರುವಾಗುತ್ತೆ. ಇಂತಹ ಗ್ರಾಮದಲ್ಲಿ ಗಡಿ ಕನ್ನಡ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಕನ್ನಡದ ಮನಸ್ಸುಗಳಲ್ಲಿ ಕನ್ನಡದ ಪ್ರೀತಿ ಮೊಳಗಿಸಿ, ಕನ್ನಡ ಜಾತ್ರೆ ಮಾಡಲು ಮುಂದಾಗಿದೆ ಬೆಳಗಾವಿ ಜಿಲ್ಲಾಡಳಿತ.
ಜಿಲ್ಲೆಯ ಗಡಿ ಭಾಗದಲ್ಲಿರುವ ಕಾಗವಾಡ ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ. ಇದು ಪಟ್ಟಣದ ಮಲ್ಲಿಕಾರ್ಜುನ ವಿದ್ಯಾಲಯ ಆವರಣದಲ್ಲಿ ಜ.30 ಹಾಗೂ 31ರಂದು ಜರುಗಲಿದೆ. ಈ ಸಮ್ಮೇಳನಕ್ಕೆ ಸರ್ವಾಧ್ಯಕ್ಷರನ್ನಾಗಿ ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಪ್ರಧಾನ ವೇದಿಕೆಗೆ ಮಿರ್ಜಿ ಅಣ್ಣಾರಾಯ ಮತ್ತು ಮುಖ್ಯಮಂಟಪಕ್ಕೆ ಅಥಣಿ ಮೋಟಗಿ ಮಠದ ಗುರುಬಸವ ಸ್ವಾಮೀಜಿ ಹೆಸರಿಡಲಾಗಿದೆ.
ಜ.30ರಂದು ಬೆಳಗ್ಗೆ 8ಕ್ಕೆ ಧ್ವಜಾರೋಹಣ ನೆರವೇರಲಿದೆ. ಬೆಳಗ್ಗೆ 9ಕ್ಕೆ ಮೆರವಣಿಗೆಯನ್ನು ತಾ.ಪಂ. ಅಧ್ಯಕ್ಷೆ ಕೃಷ್ಣಬಾಯಿ ನಂದಾಳೆ ಮತ್ತು ಉಪಾಧ್ಯಕ್ಷೆ ಶೋಭಾ ಬಂಡಗರ ಉದ್ಘಾಟಿಸಲಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಹನುಮಾನ್ ಮಂದಿರ, ಚನ್ನಮ್ಮ ವೃತ್ತದ ಮೂಲಕ ಮೆರವಣಿಗೆ ಸಾಗಲಿದೆ. ಬೆ.11ಕ್ಕೆ ಸಮ್ಮೇಳನವನ್ನು ಕಸಾಪ ಅಧ್ಯಕ್ಷ ಮನು ಬಳಿಗಾರ ಉದ್ಘಾಟಿಸಲಿದ್ದಾರೆ. ಜವಳಿ ಸಚಿವ ಶ್ರೀಮಂತ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.
ಮಲ್ಲಿಕಾರ್ಜುನ ಗುರುದೇವಾಶ್ರಮದ ಬಸವಲಿಂಗ ಸ್ವಾಮೀಜಿ, ಮಹಾಂತ ದುರದುಂಡೀಶ್ವರ ಮಠದ ನೀಲಕಂಠೇಶ್ವರ ಸ್ವಾಮೀಜಿ, ಮಲ್ಲಿಕಾರ್ಜುನ ಗುರುದೇವಾಶ್ರಮದ ಯತೀಶ್ವರಾನಂದ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ ಎಂದು ಕಸಾಪ ಆಡಳಿತ ಮಂಡಳಿ ತಿಳಿಸಿದೆ.
ಈಗಾಗಲೇ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಒಂದು ಕಡೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಕನ್ನಡ ಪ್ರೇಮಿಗಳು ಒಂದುಗೂಡಿ ಮಹಾರಾಷ್ಟ್ರದ ಗಡಿಯಲ್ಲಿ ಕನ್ನಡ ಜಾತ್ರೆ ಮಾಡಲು ಮುಂದಾಗಿದ್ದಾರೆ.