ಬೆಂಗಳೂರು: ಸಂಸದೆ ಸುಮಲತಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕುಮಾರಸ್ವಾಮಿ ವಿಚಾರಕ್ಕೆ ವಿಧಾನಸೌಧದಲ್ಲಿ ಜೆಡಿಎಸ್ ನಾಯಕ ವೈಎಸ್‌ವಿ ದತ್ತಾ ಪ್ರತಿಕ್ರಿಯಿಸಿದ್ದು, ಕನ್ನಡ ಶ್ರೀಮಂತ ಭಾಷೆ, ಕನ್ನಡದಲ್ಲಿ ಸಾಕಷ್ಟು ಪದಗಳಿವೆ. ಒಳ್ಳೊಳ್ಳೆ ಪದಗಳನ್ನು ಬಳಸಿ ರಾಜಕಾರಣದಲ್ಲಿ ಟೀಕೆ ಮಾಡಲು ಅವಕಾಶವಿದೆ ಎಂದರು.
ಈ ರೀತಿಯ ಹೇಳಿಕೆಗೆ ನನ್ನದೇ ಆಕ್ಷೇಪಗಳಿವೆ. ಇತ್ತೀಚೆಗೆ ಎಲ್ಲ ರಾಜಕಾರಣಿಗಳು ಇದೇ ತರಹ ಹೇಳಿಕೆಗಳನ್ನು ನೀಡುವುದು ಸರಿ ಕಾಣುವುದಿಲ್ಲ. ಉತ್ತಮ ಭಾಷಾ ಪ್ರಯೋಗದಿಂದ ಎಲ್ಲ ರಾಜಕಾರಣಿಗಳು ಮಾದರಿಯಾಗಬೇಕು ಎಂದರು.
ಜೆಡಿಎಸ್ನಲ್ಲಿ ಪ್ರಜ್ವಲ್ ರೇವಣ್ಣ ಉತ್ತಮ ನಾಯಕ ಎಂಬ ಸಂಸದೆ ಸುಮಲತಾ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದ ಭವಿಷ್ಯ, ಮುಂದಿನ ನಾಯಕ ಬಗ್ಗೆ ಸುಮಲತಾರಿಂದ ಹೇಳಿಸಿಕೊಳ್ಳುವ ಅಗತ್ಯ ಇಲ್ಲ.ನಮ್ಮ ಪಕ್ಷದಲ್ಲಿ ಎಲ್ಲರೂ ಸಾಮಾನ್ಯ ಕಾರ್ಯಕರ್ತರೇ ಯಾರೂ ಮೇಲಲ್ಲ, ಕೀಳಲ್ಲ ಎಂದರು.