ಜ್ವರದಿಂದ ಆಸ್ಪತ್ರೆಗೆ ದಾಖಲಾದ ಯುವಕ ಸಾವು: ದವಾಖಾನೆ ವಿರುದ್ದ ಮೃತನ ಪೋಷಕರ ಆಕ್ರೋಶ ಆನೇಕಲ್(ಬೆಂಗಳೂರು): ಮೈಕೈ ನೋವು ಮತ್ತು ಜ್ವರ ಎಂದು ಸರ್ಜಾಪುರ ಬಳಿಯ ಸೋಂಪುರ ಗೇಟ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಇಂದು ಬೆಳಗ್ಗೆ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಕಾಡ ಅಗ್ರಹಾರ-ಸೋಂಪುರ ಗೇಟ್ ಮುಖ್ಯರಸ್ತೆಯ ಕೊಮ್ಮಸಂದ್ರ ನಿವಾಸಿ ದೀಪಕ್(19) ಎಂದು ಗುರುತಿಸಲಾಗಿದೆ. ಓವರ್ ಡೋಸ್ನಿಂದಾಗಿ ಯುವಕ ಸಾವನ್ನಪ್ಪಿರುವುದಾಗಿ ಯುವಕನ ಪೋಷಕರು ಆರೋಪಿಸಿದ್ದಾರೆ.
ಕಳೆದ ಡಿಸೆಂಬರ್ 23ರಂದು ದೀಪಕ್ನನ್ನು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯಲ್ಲಿ ಚೇತರಿಕೆ ಕಾಣದೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ. ನಿನ್ನೆಯಷ್ಟೇ ಸ್ನೇಹಿತರೊಡನೆ ಮೊಬೈಲ್ನಲ್ಲಿ ಮಾತನಾಡಿದ್ದ ದೀಪಕ್, ಆರೋಗ್ಯ ಸುಧಾರಿಸಿದೆ ಚೆನ್ನಾಗಿದ್ದೇನೆ ಎಂದಿದ್ದ. ಇದೀಗ ದೀಪಕ್ ಇಂದು ಸಾವನ್ನಪ್ಪಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ’’ಯುವಕನಿಗೆ ದಿನಕ್ಕೆ 2700ರೂಗಳ ಎರಡು ಚುಚ್ಚು ಮದ್ದುಗಳನ್ನು ನೀಡುತ್ತಿದ್ದರು. ಈ ಬಗ್ಗೆ ಆಸ್ಪತ್ರೆಯವರು ದೀಪಕ್ನ ತಂದೆಯ ಬಳಿ ಬಲವಂತವಾಗಿ ಸಹಿ ಹಾಕಿಸಿಕೊಂಡಾಗಲೇ ಅನುಮಾನ ಶುರುವಾಗಿತ್ತು. ಆಗಲೇ ಸಹಿ ಹಾಕದಂತೆ ಒತ್ತಾಯ ಮಾಡಿದ್ದೆ. ಆದರೂ ಹಾಕಿಸಿಕೊಂಡರು. ಶನಿವಾರ ಮತ್ತು ಮಂಗಳವಾರ ನೀಡಿದ ಚುಚ್ಚು ಮದ್ದಿನಿಂದ ಸಾವು ಸಂಭವಿಸಿದೆ. ಚಳಿಜ್ವರ, ಮೈಕೈ ನೋವಿಗೆ ದೀಪಕ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದೆವು. ಸ್ಕ್ಯಾನಿಂಗ್ ಎಲ್ಲ ಮುಗಿಸಿ ಆಗಲೇ ತೀವ್ರ ನಿಗಾ ಘಟಕಕ್ಕೆ ದಾಖಲಿಸಿದರು. ಆಗಲೇ ಅನುಮಾನ ಶುರುವಾಗಿತ್ತು’’ ಎಂದು ಮೃತ ಯುವಕನ ತಾಯಿ ನಾಗವೇಣಿ ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ವೈದ್ಯರಾದ ಮೋಹನ್ ಕುಮಾರ್, ’’ಕಳೆದ ಡಿ. 23 ರಂದು ದೀಪಕ್ ಎಂಬ ಯುವಕ ನಮ್ಮ ಆಸ್ಪತ್ರೆಗೆ ದಾಖಲಾದ. ಆಗ ನೆಗಡಿ, ಮೈಕೈ ನೋವು, ಜ್ವರ ಎಂದೇ ಬಂದಿದ್ದರು. ಬರಬರುತ್ತಾ ಮಾಮೂಲಿ ಚಿಕಿತ್ಸೆಗೆ ಸ್ಪಂದಿಸದಾಗ ಯುವಕನನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಲಾಯಿತು. ಆಗ ಯುವಕನಿಗೆ ಅಪರೂಪದ ಖಾಯಿಲೆ ಇರುವುದು ಬೆಳಕಿಗೆ ಬಂದಿತು. ನಂತರ ಉಸಿರಾಟದ ತೊಂದರೆ, ಎದೆ ನೋವು, ಹೃದಯ ಬಡಿತ ಏರತೊಡಗಿದಾಗ ಅನಿವಾರ್ಯವಾಗಿ ರೋಗಿಯ ಉಳಿಸಲು ತೀವ್ರ ತುರ್ತು ನಿಘಾ ಘಟಕಕ್ಕೆ ದಾಖಲಿಸಬೇಕಾಗಿ ಬಂತು. ಈ ಕುರಿತು ಪ್ರತಿ ದಿನ ಪೋಷಕರಿಗೆ ವಿಚಾರ ಮುಟ್ಟಿಸಿದ್ದೇವೆ. ಆಗ ಸಾಮಾನ್ಯ ಬೆಡ್ ಶುಲ್ಕವನ್ನೇ ಪಡೆದು ನೆರವಾಗಿದ್ದೇವೆ’’ ಎಂದು ಸ್ಪಷ್ಟನೆ ನೀಡಿದ್ದಾರೆ.
’’ಎರಡು ಲಕ್ಷದಲ್ಲಿ ಒಬ್ಬರಿಗೆ ಕಾಣ ಸಿಗುವ ರೋಗನಿರೋಧಕ ಶಕ್ತಿ ಕಳೆದುಕೊಳ್ಳುವ ಖಾಯಿಲೆಗೆ ದೀಪಕ್ ತುತ್ತಾಗಿದ್ದ. ವಯಸ್ಸು ಚಿಕ್ಕದಾದ್ದರಿಂದ ಉಳಿಸುವ ಸಾಹಸಕ್ಕೆ ವೈದ್ಯರ ತಂಡ ಕೊನೆವರೆಗೂ ಹೆಣಗಾಡಿದ್ದೇವೆ. ಸಾವು ನಮಗೂ ದುಃಖ ತರಿಸಿದೆ‘‘ ಎಂದರು. ಇನ್ನು ಮಧ್ಯದಲ್ಲಿಯೇ ಬೇರೆ ಆಸ್ಪತ್ರೆಗಾದರೂ ಹೋಗಿ ಎಂದರೂ ಪೋಷಕರು ಒಪ್ಪಿರಲಿಲ್ಲ. ತೀವ್ರ ಉಸಿರಾಟದ ತೊಂದರೆ, ಎದೆ ನೋವು, ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದ. ತಪಾಸಣೆ ಮಾಡಿದಾಗ ಹೃದಯ ಹಾಗೂ ಶ್ವಾಸಕೋಶದಲ್ಲಿ ನೀರು ಶೇಖರಣೆಗೊಂಡಿರುವುದು ಕಂಡುಬಂದಿತ್ತು. ರೋಗನಿರೋಧಕ ಚುಚ್ಚುಮದ್ದಿಗೂ ತಡೆಯದ ದೀಪಕ್ ಗೆ ಬುಧವಾರ ಬೆಳಗ್ಗೆ ಬಿಪಿ ಏರಿಳಿತ ಕಂಡು ಬಂದಿತ್ತು’’ ಎಂದು ತಿಳಿಸಿದ್ದಾರೆ.
ಈ ಸಂಬಂಧ ಸರ್ಜಾಪುರ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಎಸ್ ಎಸ್ ಆಗಮಿಸಿ ವಿಚಾರಣೆ ನಡೆಸಿದ್ದಾರೆ. ಮೃತನ ಪೋಷಕರು ನಮಗೆ ಏನೂ ಬೇಡ ಎಂದು ದಿಲೀಪನ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ :ಬಿರಿಯಾನಿ ತಿನ್ನೋಣ ಬಾ ಎಂದು ಕರೆಯಿಸಿ ಅಪಹರಣ: ಹಣ ಕೊಡಲು ನಿರಾಕರಿಸಿದಕ್ಕೆ ಕಿಡ್ನಾಪ್... 2 ಕಿಮೀ ಚೇಸ್ ಮಾಡಿ ಆರೋಪಿ ಸೆರೆ