ಬೆಂಗಳೂರು:ಕೇಂದ್ರ ಬಿಜೆಪಿ ಸರ್ಕಾರ ಮತ್ತು ಅಮಿತ್ ಶಾ ಅವರು ಹಿಂದಿ ಭಾಷೆಯ ಕಲಿಕೆ ಕುರಿತು ಜನರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಇಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಯೂತ್ ಕಾಂಗ್ರೆಸ್ ಪ್ರತಿಭಟನೆ.. ನಗರದ ಮೌರ್ಯ ಸರ್ಕಲ್ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ದಿನೇಶ್ ಗುಂಡೂರಾವ್ ಜೊತೆ ಎಂಎಲ್ಸಿ ರಿಜ್ವಾನ್ ಅರ್ಷದ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ, ಮಹಮ್ಮದ್ ಹ್ಯಾರಿಸ್ ನಲಪಾಡ್ ಭಾಗಿಯಾಗಿದ್ದರು. ಕೇಂದ್ರ ಸರ್ಕಾರ, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ ಪ್ರತಿಭಟನಾಕಾರರು ಅಮಿತ್ ಶಾ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ದಿನೇಶ್ ಗುಂಡೂರಾವ್ ಆಕ್ರೋಶ:
ಕೇಂದ್ರ ಸರ್ಕಾರದಿಂದ ಬಲವಂತದ ಹಿಂದಿ ಹೇರಿಕೆ ವಿಚಾರ ಮಾತನಾಡಿದ ದಿನೇಶ್ ಗುಂಡೂರಾವ್, ಅನಾವಶ್ಯಕವಾಗಿ ಅಮಿಶ್ ಶಾ ಅವರು ಗೊಂದಲ ಸೃಷ್ಟಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಹಿಂದಿ ಹೇರಿಕೆ ಕೆಲಸ ಮಾಡುತ್ತಿದ್ದಾರೆ. ಇದು ಸರಿ ಅಲ್ಲ. ಭಾರತ ರಾಷ್ಟ್ರ ಹಲವಾರು ರಾಷ್ಟ್ರಗಳು ಕೂಡಿ ಒಂದು ರಾಷ್ಟ್ರವಾಗಿದೆ. ರಾಜ್ಯದಲ್ಲಿ ಕೂಡ ಹಲವಾರು ಭಾಷೆ ಮಾತನಾಡುವ ಜನ ಇದ್ದಾರೆ. ನಾವೇನು ಹಿಂದಿ ವಿರೋಧಿಗಳಲ್ಲ. ಒಂದೇ ಭಾಷೆ, ಒಂದೇ ರಾಷ್ಟ್ರ ಅನ್ನುವುದಲ್ಲ. ಬಿಜೆಪಿ ನಾಯಕರು ಅಮಿತ್ ಶಾ ಬಳಿ ಹೋಗಿ ರಾಜ್ಯದ ಜನ ಕ್ಷಮೆ ಕೇಳಬೇಕು ಎಂದು ಹೇಳುವ ಧೈರ್ಯ ಮಾಡಬೇಕು. ಜನರಿಂದ ಆಯ್ಕೆಯಾಗಿ ಹೋದ 25 ಎಂಪಿಗಳು ಏನ್ ಮಾಡ್ತಿದ್ದಾರೆ. ಈ ರೀತಿಯಲ್ಲಿ ಭಾಷೆ ವಿಚಾರವಾಗಿ ಮಾತಾಡುವುದು ತಪ್ಪು ಎಂದು ಹೇಳಬೇಕು. ಪ್ರವಾಹ ಪರಿಸ್ಥಿತಿ ಬಗ್ಗೆ ಒಂದು ಮಾತಾಡಲ್ಲ. ರಾಜ್ಯದ ಹಲವಾರು ಕಡೆ ಯೂತ್ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತದೆ. ಅಮಿತ್ ಶಾ ಅವರು ತಪ್ಪೊಪ್ಪಿಗೆ ಕೊಡಬೇಕು. ರಾಜ್ಯದ ಜನರ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು.
ಅರ್ಕಾವತಿ ಡಿನೋಟಿಫಿಕೇಶ್ ವಿಚಾರ ಮಾತನಾಡಿ, ಹೈಕಮಾಂಡ್ ಹೇಳಿದಂತೆ ಬಿಜೆಪಿ ನಾಯಕರು ಕೇಳುತ್ತಿದ್ದಾರೆ. ಬೆಂಗಳೂರಿನ ವಿಚಾರ ಆಗಿರಲಿ , ನೀರಾವರಿ ಯೋಜನೆ ವಿಚಾರ ಇರಲಿ, ಯಾವುದನ್ನು ಬೇಕಾದ್ರು ತನಿಖೆಗೆ ಕೊಡಲಿ ಜೊತೆಗೆ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಆದ ಯೋಜನೆಗಳನ್ನೂ ತನಿಖೆಗೆ ಕೊಡಬೇಕು. ಯಡಿಯೂರಪ್ಪ ಏನ್ ಅಂದಿದ್ರು, ದ್ವೇಷದ ರಾಜಕಾರಣ ಮಾಡಲ್ಲ ಅಂತಾ ಹೇಳಿದ್ರು. ಇವಾಗ ಏನ್ ಮಾಡ್ತಿದ್ದಾರೆ. ಇದು ದ್ವೇಷದ ರಾಜಕಾರಣ ಅಲ್ಲದೆ ಮತ್ತೇನು ಎಂದರು.