ಬೆಂಗಳೂರು:ಅಪ್ರಾಪ್ತೆ ಜೊತೆ ದೇವಸ್ಥಾನದಲ್ಲಿ ಮದುವೆಯಾಗಿ ಬಳಿಕ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಕೊಳ್ಳಲು ಆಧಾರ್ ಕಾರ್ಡ್‌ನಲ್ಲಿ ಬಾಲಕಿಯ ವಯಸ್ಸು ತಿದ್ದುಪಡಿ ಮಾಡಲು ಯತ್ನಿಸಿದ ಆರೋಪಿ ಹಾಗೂ ಆತನಿಗೆ ಸಹಾಯ ಮಾಡಿದ ಮೂವರನ್ನು ರಾಜಗೋಪಾಲನಗರ ಪೊಲೀಸರು ಬಂಧಿಸಿದ್ದಾರೆ.
ಪ್ರಮುಖ ಆರೋಪಿ ಮನು(21) ಬಂಧನದ ಬಳಿಕ ವೆಂಕಟೇಶ್, ಪ್ರಭು ಹಾಗೂ ಮಲ್ಲೇಶ್ ಎಂಬವರನ್ನು ಬಂಧಿಸಲಾಗಿದೆ. ಮೂಲತಃ ಹುಲಿಯೂರು ದುರ್ಗದ ನಿವಾಸಿ ಮನು ಲಗ್ಗೆರೆಯಲ್ಲಿ ಬಾಡಿಗೆ ರೂಮ್ ಮಾಡಿಕೊಂಡು ವಾಸವಿದ್ದ. ಕೋವಿಡ್ ಸಂದರ್ಭದಲ್ಲಿ ಬೆಂಗಳೂರಿಗೆ ಬಂದು ಟಾಟಾ ಏಸ್ ವಾಹನವನ್ನು ಓಡಿಸಿಕೊಂಡು ಜೀವನ ನಡೆಸುತ್ತಿದ್ದ.
ತನ್ನ ಅತ್ತೆ ಮನೆಗೆ ಆಗಾಗ ಬಂದು ಹೋಗುತ್ತಿದ್ದ ಈತ, ಆಕೆಯ 17 ವರ್ಷದ ಅಪ್ರಾಪ್ತ ಮಗಳಿಗೆ ಪ್ರೀತಿಸುವಂತೆ ಹಾಗೂ ಮದುವೆಗೆ ಪೀಡಿಸಿದ್ದ. ಅದಕ್ಕೆ ಆಕೆ ಒಪ್ಪದಿದ್ದಾಗ ನಿನ್ನನ್ನು ಕೊಂದು, ತಾನು ಕೂಡ ಸಾಯುವುದಾಗಿ ಬೆದರಿಸಿದ್ದ. ಬಳಿಕ ಬಾಲಕಿಯು ಆತನ ಒತ್ತಡಕ್ಕೆ ಮಣಿದು ಮದುವೆಗೆ ಒಪ್ಪಿಕೊಂಡಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೇವಾಲಯಲ್ಲಿ ಮದುವೆ:ಏಪ್ರಿಲ್ 16ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಅರೋಪಿ ಮನು ಟಾಟಾ ಏಸ್ ವಾಹನದಲ್ಲಿ ಅಪ್ರಾಪ್ತಳನ್ನು ಕರೆದುಕೊಂಡು ಹೋಗಿ ವಿಧಾನಸೌಧ ಲೇಔಟ್ನ ಗಣಪತಿ ದೇವಾಲಯಲ್ಲಿ ತಾಳಿ ಕಟ್ಟಿದ್ದ. ಇದಕ್ಕೆ ಸ್ನೇಹಿತ ವೆಂಕಟೇಶ್ ಸಹಾಯ ಮಾಡಿದ್ದ. ಆ ನಂತರ ಲಗ್ಗೆರೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ವಿವಾಹ ನೋಂದಣಿ ಮಾಡಲು ನಿರ್ಧರಿಸಿದ್ದ. ಇದಕ್ಕೆ ಪ್ರಭು ಮತ್ತು ಮಲ್ಲೇಶ್ ಎಂಬುವರು ಮನುಗೆ ಆಧಾರ್ ತಿದ್ದುಪಡಿ ಮಾಡಿಕೊಡಲು ಸಹಾಯ ಮಾಡಿದ್ದರು.
ಬಲವಂತದ ದೈಹಿಕ ಸಂಪರ್ಕ:ಮನು ಯುವತಿಯನ್ನು ವಿವಾಹವಾಗಿರುವುದಾಗಿ ಮದುವೆ ಆಮಂತ್ರಣ ಪತ್ರವನ್ನು ಪ್ರಿಂಟಿಂಗ್ ಪ್ರೆಸ್‌ನಲ್ಲಿ ಮುದ್ರಿಸಿಕೊಂಡಿದ್ದ. ಜೊತೆಗೆ ಅಪ್ರಾಪ್ತೆಯ ಆಧಾರ್ ಕಾರ್ಡ್‌ನಲ್ಲಿ ಆಕೆಯ ಜನ್ಮ ದಿನಾಂಕವನ್ನು ತಿದ್ದುಪಡಿ ಮಾಡಿಸಿ, ನಂತರ ಹೊಸ ಆಧಾರ್ ಕಾರ್ಡ್ ಮಾಡಿಸಿಟ್ಟುಕೊಂಡಿದ್ದ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿಕೊಂಡು, ಕೊಟ್ಟಿಗೆಪಾಳ್ಯದಲ್ಲಿ ಅಪ್ರಾಪ್ತೆಯ ಇಚ್ಛೆಯ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಿದ್ದ. ನಂತರ ಪಾಲಕರು ಆಕೆಯನ್ನು ಕೇಳಿದಾಗ ನಡೆದ ವಿಚಾರವನ್ನೆಲ್ಲ ವಿವರಿಸಿದ್ದಳು. ಬಳಿಕ ಪಾಲಕರು ರಾಜಗೋಪಾಲನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸಬ್ ರಿಜಿಸ್ಟ್ರಾರ್ ಕಚೇರಿಗೆ ನೋಟಿಸ್:ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು, ಮನು ಸೇರಿ ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸಬ್ ರಿಜಿಸ್ಟ್ರಾರ್ ಕಚೇರಿಗೂ ನೋಟಿಸ್ ನೀಡಲಾಗಿದೆ. ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ನಕಲಿ ವ್ಯಕ್ತಿಗಳ ಮೂಲಕ ಜಾಮೀನು: ಹಲಸೂರು ಗೇಟ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲು