ಬೆಂಗಳೂರು: ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು 2023ರ ಅಂತ್ಯಕ್ಕೆ ಪೂರ್ಣಗೊಳಿಸಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬದಲು ಉತ್ತರ ನೀಡಿದ ಗೃಹ ಸಚಿವರು, ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯನ್ನು 2013-14 ನೇ ಸಾಲಿನಲ್ಲಿ ಆರಂಭಿಸಿದ್ದು, ಈವರೆಗೆ 7721.65 ಕೋಟಿ ರೂ.ಗಳ ಸಂಚಿತ ವೆಚ್ಚವಾಗಿದೆ ಎಂದರು.
ಭೂ ಸ್ವಾಧೀನ ಮಾಡಲಾಗುತ್ತಿದೆ. ಇದಕ್ಕೆ ಎರಡು ವರ್ಷವಾಗುವ ಕಾರಣ ಯೋಜನೆಯಡಿಯಲ್ಲಿ ಕುಡಿಯುವ ನೀರೊದಗಿಸುವ ಅಂತರ್ಜಲ ಮರುಪೂರ್ಣಗೊಳಿಸುವ ನೀರಾವರಿ ಮತ್ತು ಕೆರೆ ತುಂಬಿಸುವ ಯೋಜನೆಯ ಉದ್ದೇಶವನ್ನು ಸಬಲಗೊಳಿಸಲು ಗುತ್ತಿಗೆದಾರರು ರೈತರ ಒಪ್ಪಿಗೆ ಪಡೆದು ಕಾಮಗಾರಿ ಪ್ರಾರಂಭಿಸಲು ಒಪ್ಪಂದ ಪತ್ರದಲ್ಲಿ ಕರಾರು ವಿಧಿಸಲಾಗಿದೆ. ಜೊತೆಗೆ ರೈತರು, ನಿಗಮ ಮತ್ತು ಗುತ್ತಿಗೆದಾರರ ನಡುವೆ ತ್ರಿಪಕ್ಷೀಯ ಕರಾರು ಒಪ್ಪಂದ ಮಾಡಿಕೊಂಡು ರೈತರ ಸಹಮತ ಪಡೆದು ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದು, ಯೋಜನೆಯಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿದೆ. ಹೊಸ ಭೂಸ್ವಾಧೀನ ಕಾಯ್ದೆ ಅನ್ವಯ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.
ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕುಡಿಯುವ ನೀರಿನ ಯೋಜನೆಯ ಮಹತ್ವಾಕಾಂಕ್ಷೆ ಹೊಂದಿರುವ ಎತ್ತಿನ ಹೊಳೆ ಯೋಜನೆ 2023ಕ್ಕೆ ಮುಗಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ. ನೀರು ಒದಗಿಸಲು ಸರ್ಕಾರ ಬದ್ದವಾಗಿದೆ. ಈಗಾಗಲೇ ಮೊದಲ ಹಂತ ಮುಗಿಯುತ್ತಾ ಬಂದಿದೆ. 2ನೇ ಹಂತ ಕೈಗೆತ್ತಿಕೊಳ್ಳುತ್ತಿದ್ದೇವೆ. ಇದಕ್ಕೆ ಸ್ವಲ್ಪ ಸಮಯ ಬೇಕಾಗಲಿದೆ ಎಂದರು.
ಡಿಜೆ ಹಳ್ಳಿ ಗಲಭೆ ಕೇಸ್, ಫೆಬ್ರವರಿಯಲ್ಲಿ ಆರೋಪ ಪಟ್ಟಿ ಸಲ್ಲಿಕೆ:
ಡಿಕೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವವರ ವಿರುದ್ಧ ಫೆಬ್ರವರಿಯಲ್ಲಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನ ಪರಿಷತ್ನ ಪ್ರಶ್ನೋತ್ತರ ಕಲಾಪದಲ್ಲಿ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತರ ವಿರುದ್ಧ ಆರೋಪ ಪಟ್ಟಿ ಸಲ್ಲಿಸದ ಬಗ್ಗೆ ಸದಸ್ಯ ಸಿ.ಎಂ ಇಬ್ರಾಹಿಂ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಗಲಭೆ ಯಾಕೆ ಆಯಿತು?, ಎಲ್ಲಿಂದ ಆಯಿತು? ಇತ್ಯಾದಿ ಎಲ್ಲವೂ ಈಗಾಗಲೇ ಬಹಿರಂಗವಾಗಿದೆ. ಈ ಸಂಬಂಧ 72 ಎಫ್ಐಆರ್ಗಳನ್ನು ಬೆಂಗಳೂರು ಪೊಲೀಸರು, 2 ಎಫ್ಐಆರ್ಗಳನ್ನು ಎನ್ಐಎ ನವರು ಹಾಕಿದ್ದಾರೆ. ಎನ್ಐಎ ಕೇಸ್ ಹೈಕೋರ್ಟ್ ಮೇಲುಸ್ತುವಾರಿಯಲ್ಲಿದೆ. ನಮ್ಮ ಪ್ರಕರಣಗಳಲ್ಲಿ ಈಗಾಗಲೇ ಆರೋಪ ಪಟ್ಟಿ ಸಲ್ಲಿಸಿದ್ದೇವೆ. ಎರಡು ಮೂರು ಮಾತ್ರ ಬಾಕಿಯಿದ್ದು, ಫೆಬ್ರವರಿಯಲ್ಲಿ ಅದನ್ನೂ ಸಲ್ಲಿಸಲಿದ್ದೇವೆ ಎಂದರು.