ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಪ್ರಯೋಗಾಲಯ ಘಟಕ ಸ್ಥಾಪಿಸುವ ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ರಕ್ಷಣಾ ಸಚಿವಾಲಯ ಒಪ್ಪಿಗೆ ನೀಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಅಗತ್ಯ ಭೂಮಿ ಹಾಗೂ ಇತರ ಸೌಲಭ್ಯ ಕಲ್ಪಿಸುವುದಾಗಿ ಸಿಎಂ ಆಶ್ವಾಸನೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಡಿಆರ್‌ಡಿಒ ಲ್ಯಾಬ್ ನಿರ್ಮಿಸಲು ಬಿಎಸ್ವೈ ಮನವಿ... ಪ್ರಸ್ತಾವನೆ ಪರಿಗಣಿಸಿದ ರಕ್ಷಣಾ ಸಚಿವಾಲಯ - ಶಿವಮೊಗ್ಗದಲ್ಲಿ ಡಿಆರ್‌ಡಿಒ ಪ್ರಯೋಗಾಲಯ
ನವದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನ ಭೇಟಿ ಮಾಡಿದರು.
ನವದೆಹಲಿಯಲ್ಲಿ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭೇಟಿ ಮಾಡಿದರು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಸ್ವತಂತ್ರ ಪ್ರಯೋಗಾಲಯವನ್ನು ಶಿವಮೊಗ್ಗದಲ್ಲಿ ಸ್ಥಾಪಿಸುವಂತೆ ಮನವಿ ಮಾಡಿದರು. ಕರ್ನಾಟಕ ಸರ್ಕಾರದ ಪರವಾಗಿ ಬಂದ ಪ್ರಸ್ತಾವನೆಯನ್ನು ರಕ್ಷಣಾ ಸಚಿವಾಲಯ ಪುರಸ್ಕರಿಸಿದ್ದು, ಡಿಆರ್‌ಡಿಒ ಸಂಶೋಧನಾ ಘಟಕವನ್ನು ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸುವ ಪ್ರಸ್ತಾಪವನ್ನು ಪರಿಗಣಿಸುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು. ಆದರೆ ಪೂರ್ಣ ಪ್ರಮಾಣದ ಸ್ವತಂತ್ರ ಡಿಆರ್‌ಡಿಒ ಪ್ರಯೋಗಾಲಯವನ್ನು ಶಿವಮೊಗ್ಗದಲ್ಲಿ ಸ್ಥಾಪಿಸಬೇಕು ಸಾಕಷ್ಟು ಸಂಖ್ಯೆಯ ತಂತ್ರಜ್ಞರು ಮತ್ತು ವಿಜ್ಞಾನಿಗಳ ತಂಡವನ್ನು ಅದು ಹೊಂದಿರಬೇಕು ಎನ್ನುವ ನಿರೀಕ್ಷೆ ರಾಜ್ಯ ಸರ್ಕಾರದ್ದಾಗಿದೆ ಎಂದು ಸಿಎಂ ಬಿಎಸ್ವೈ ರಕ್ಷಣಾ ಸಚಿವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದರು.
ಪಶ್ಚಿಮಘಟ್ಟ ಪ್ರದೇಶದಲ್ಲಿ ಮಿಲಿಟರಿ ಬಳಕೆಗಾಗಿ ನೈಸರ್ಗಿಕ ಪರಿಹಾರ ಕ್ರಮಗಳನ್ನು ಪ್ರಯೋಗಾಲಯವು ಅನ್ವೇಶಿಸಬಹುದಾಗಿದೆ. ಪ್ರಯೋಗಾಲಯದ ನಿರ್ಮಾಣಕ್ಕೆ ಅಗತ್ಯವಾದ ಭೂಮಿ ಮತ್ತು ಸಿಬ್ಬಂದಿಗೆ ಅಧಿಕೃತ ವಸತಿ ಗೃಹಗಳ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಕಲ್ಪಿಸಲಿದೆ ಎಂದು ಸಿಎಂ ಭರವಸೆ ನೀಡಿ ಡಿಆರ್‌ಡಿಒ ಪ್ರಯೋಗಾಲಯ ಸ್ಥಾಪನೆಗೆ ಮತ್ತೊಮ್ಮೆ ಮನವಿ ಮಾಡಿದರು.