ಕರ್ನಾಟಕ

karnataka

By ETV Bharat Karnataka Team

Published : Oct 2, 2023, 7:22 AM IST

ETV Bharat / state

ಹಲವಾರು ಊರುಗಳನ್ನು ಸುತ್ತಿ ಬರೆದಿರುವ ಕಥನ 'ಪರ್ವ' ಕಾದಂಬರಿ: ಸಾಹಿತಿ ಎಸ್ ಎಲ್ ಭೈರಪ್ಪ

ಪರ್ವ ಕಾದಂಬರಿ ಬರೆದ ಬಗ್ಗೆ ಸಾಹಿತಿ ಎಸ್​ ಎಲ್​ ಭೈರಪ್ಪ ಅವರು ತಮ್ಮ ಅನುಭವ ಹಂಚಿಕೊಂಡರು.

Programe about S L Bhyrappa Book parva
ಎಸ್​ ಎಲ್​ ಭೈರಪ್ಪ ಅವರ ಜೊತೆ ಮಾತುಕತೆ ಕಾರ್ಯಕ್ರಮ

ಬೆಂಗಳೂರು: ಹಲವಾರು ಊರುಗಳನ್ನು ಸುತ್ತಿ ಬರೆದಿರುವ ಕಥನ 'ಪರ್ವ' ಕಾದಂಬರಿಯಾಗಿದೆ ಎಂದು ಸಾಹಿತಿ ಎಸ್. ಎಲ್. ಭೈರಪ್ಪ ಹೇಳಿದ್ದಾರೆ. ಖ್ಯಾತ ಕಾದಂಬರಿಗಾರ್ತಿ ಸಹನಾ ವಿಜಯ ಕುಮಾರ್‌ ಅವರ ನಿರೂಪಣೆಯಲ್ಲಿ 'ಭೈರಪ್ಪ ಅವರ ಕಾದಂಬರಿ ಶ್ರೇಣಿಯಲ್ಲಿ ಪರ್ವದ ಸಂದರ್ಭದ ಕುರಿತು ಅವಲೋಕನ' ಒಂದಿಷ್ಟು ಮಾತು - ಕತೆ, ಅನುಭವಗಳ ಅನಾವರಣ ಕಾರ್ಯಕ್ರಮ ಭಾನುವಾರ ನಗರದ ಚೌಡಯ್ಯ ಮೆಮೋರಿಯಲ್‌ ಹಾಲ್​ನಲ್ಲಿ ನೆರವೇರಿತು.

ಹಿರಿಯ ಕಾದಂಬರಿಕಾರ, ಸಾಹಿತಿ ಎಸ್. ಎಲ್. ಭೈರಪ್ಪ 'ಪರ್ವ' ಕಾದಂಬರಿಯ ಕುರಿತು ಮಾತನಾಡಿ, ವ್ಯಾಸ ಭಾರತದಲ್ಲಿ ಮಹಾಭಾರತವನ್ನು ಭಿನ್ನವಾಗಿ ಕಟ್ಟಿಕೊಟ್ಟಿದ್ದು, ಇದೊಂದು ವಿಚಾರ ವಿಸ್ತರಣೆಯನ್ನು ನಂಬಿಸಿಕೊಡುವ ಕ್ರಿಯೆಯಾಗಿದೆ. ನನ್ನ ದೃಷ್ಟಿಯಲ್ಲಿ ಮಹಾಭಾರತ ಕಂಡ ಬಗೆಯನ್ನು 'ಪರ್ವ'ದಲ್ಲಿ ವಿವರಿಸಿದ್ದೇನೆ ಎಂದರು.

ಈ ಸಂದರ್ಭದಲ್ಲಿ ನನಗೆ ಬಹಳ ಸವಾಲೆನಿಸಿದ್ದು ಪಾತ್ರಗಳ ವಯಸ್ಸು ಹಾಗೂ ಅವರ ವೇಷಭೂಷಣ. ವಯಸ್ಸಿನ ಮಿತಿಯನ್ನು ತಿಳಿಯಲು ನಾನು ಮಹಾಭಾರತದ ಹಿರಿಯ ಹಾಗೂ ಅತೀ ಕಿರಿಯನ ವಯಸ್ಸನ್ನು ಮೊದಲು ಅಂದಾಜಿಸಿದೆ. ನಂತರದಲ್ಲಿ ಪ್ರತಿಯೊಂದು ಪಾತ್ರಗಳ ವಯಸ್ಸನ್ನು ದಾಖಲಿಸಿದೆ. ಹಲವಾರು ಊರುಗಳನ್ನು ಸುತ್ತಿ ಬರೆದಿರುವ ಕಥನ 'ಪರ್ವ' ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಪರ್ವದಿಂದ ಭಾರತದ ಕುರಿತು ನನ್ನ ಪ್ರೀತಿ ಹೇರಳವಾಯಿತು. ಭಾರತದ ಅಂಗವಾಗಿ ನಾನೊಬ್ಬ ಕನ್ನಡಿಗ. ಇನ್ನು ಲೇಖಕನಾದವನಿಗೆ ಅನುಭವ ಹಾಗೂ ಜಗತ್ತಿನ ಪರಿಚಯವಿರಬೇಕು. ಆಗ ಮಾತ್ರ ಆತ ನಿಜವಾದ ಬರಹಗಾರನಾಗುತ್ತಾನೆ. ಅನುಭವದಿಂದ ಹೊರಬಂದ ಹೂರಣ ಎಂದಿಗೂ ಶ್ರೇಷ್ಠ ವಾಗಿರುತ್ತದೆ ಎಂದರು.

ಖ್ಯಾತ ರಂಗ ನಿರ್ದೇಶಕ ಪ್ರಕಾಶ್‌ ಬೆಳವಾಡಿ, ಆಂಗ್ಲ ಅವತರಣಿಕೆಯಲ್ಲಿ ಪರ್ವವನ್ನು ರಂಗಕ್ಕೆ ತಂದ ಬಗೆ ಕುರಿತು ಮಾತನಾಡಿದರು. ಮಹಾಭಾರತವನ್ನು ರಂಗರೂಪದಲ್ಲಿ ಕಟ್ಟಿಕೊಡುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ನಿರೂಪಣೆ, ತಂತ್ರ ಹಾಗೂ ರಂಗ ವಿನ್ಯಾಸದ ಪರಿಯನ್ನು ಕಟ್ಟಿಕೊಡುವುದು ಸಾಹಸವಾಗಿತ್ತು. ಇದನ್ನು ಕೃತಿಯ ರೂಪದಲ್ಲಿ ನೀಡಿರುವ ಎಸ್​ ಎಲ್​ ಭೈರಪ್ಪ ಅವರು ನಿಜಕ್ಕೂ ಭಾರತದ ಶ್ರೇಷ್ಠ ಬರಹಗಾರರು ಎಂದರು.

ಖ್ಯಾತ ಕಾದಂಬರಿಗಾರ್ತಿ ಸಹನಾ ವಿಜಯ ಕುಮಾರ್ ಅವರು, 'ಪರ್ವ' ಕಾದಂಬರಿ ಹುಟ್ಟಿಕೊಂಡ ಬಗೆ, ಸ್ತ್ರೀ ಪಾತ್ರಗಳ ಸಂವೇದನೆ, ಇಂಗ್ಲೀಷ್ ಹಾಗೂ ಕನ್ನಡ 'ಪರ್ವ' ರಂಗ ಪ್ರವೇಶದ ಅನುಭವ ಮತ್ತು ಕಟ್ಟುವಿಕೆಯ ಸವಾಲುಗಳು, ರಂಗದಲ್ಲಿ ಪಾತ್ರಧಾರಿಗಳ ಕಟ್ಟುವಿಕೆ ಹೀಗೆ ಹಲವು ವಿಚಾರಗಳ ಕುರಿತು ಸಂವಾದ ನಡೆಸಿಕೊಟ್ಟರು.

ಇದನ್ನೂ ಓದಿ :10ನೇ ವಯಸ್ಸಿಗೆ 3 ಪುಸ್ತಕ ಬರೆದ ಅಭಿಜೀತಾ ಗುಪ್ತಾ.. ಈ ಪುಟಾಣಿ ಯಾರ ಮರಿ ಮೊಮ್ಮಗಳು ಗೊತ್ತಾ?

ABOUT THE AUTHOR

...view details