ಬೆಂಗಳೂರು: ಜಗತ್ತಿನಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳುವ ರೋಗಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕೂಡಾ ಒಂದು. ಇತ್ತೀಚಿನ ದಿನಗಳಲ್ಲಿ ಪುರುಷರಷ್ಟೇ ಮಹಿಳೆಯರನ್ನೂ ಈ ವ್ಯಾಧಿ ಕಾಡುತ್ತಿರುವುದು ಆತಂಕ ಹೆಚ್ಚಿಸುತ್ತಿದೆ. ಅಧ್ಯಯನದ ಪ್ರಕಾರ ಶ್ವಾಸಕೋಶದ ಕ್ಯಾನ್ಸರ್‌ಗೆ ಧೂಮಪಾನ, ವಾಯುಮಾಲಿನ್ಯ ಇನ್ನಿತರ ಕಾರಣಗಳಿವೆ. ಇತ್ತೀಚೆಗೆ ಮಹಿಳೆಯರಿಗೂ ಇದರ ಬಾಧೆ ತೀವ್ರವಾಗಿದೆ. ಶೇಕಡಾ 65 ರಷ್ಟು ಪುರುಷರು ಹಾಗೂ ಶೇ 35 ರಷ್ಟು ಮಹಿಳೆಯರಲ್ಲಿ ಈ ಸಮಸ್ಯೆ ಕಂಡುಬರುತ್ತಿದೆ.
ಶ್ವಾಸಕೋಶದ ಕ್ಯಾನ್ಸರ್ನ ಪ್ರಮುಖ ಲಕ್ಷಣಗಳೆಂದರೆ ಕೆಮ್ಮು, ಉಸಿರಾಟದ ತೊಂದರೆ, ಬೆನ್ನು ನೋವು, ತಲೆನೋವು. ಈ ರೀತಿಯ ರೋಗ ಲಕ್ಷಣಗಳು ಕಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದೊಳಿತು. ಎದೆಯ ಎಕ್ಸ್‌ರೇ, ಸಿಟಿ ಸ್ಕ್ಯಾನ್, ಪೆಟ್ ಸ್ಕ್ಯಾನ್ ಮೂಲಕ ಶ್ವಾಸಕೋಶದ ಕ್ಯಾನ್ಸರ್ ಅನ್ನು ಪತ್ತೆ ಹಚ್ಚಬಹುದು. ಶಸ್ತ್ರಚಿಕಿತ್ಸೆ ಹಾಗೂ ಕಿಮೋಥೆರಪಿ, ರೇಡಿಯೇಷನ್ ಚಿಕಿತ್ಸೆ ಮೂಲಕ ಕ್ಯಾನ್ಸರ್ ಗುಣಪಡಿಸಬಹುದು. ಕ್ಯಾನ್ಸರ್ನ ಇನ್ನಿತರ ಪ್ರಭೇದಗಳು ದೇಹವೆಲ್ಲಾ ಹರಡಿದರೂ ಉತ್ತಮ ಚಿಕಿತ್ಸೆ ಮೂಲಕ ಗುಣಪಡಿಸಲು ಸಾಧ್ಯವಿದೆ.
ಕ್ಯಾನ್ಸರ್ ವಿಚಾರವಾಗಿ ಜನರಲ್ಲಿ ಸಾಕಷ್ಟು ತಪ್ಪು ತಿಳುವಳಿಕೆಗಳಿವೆ. ಕ್ಯಾನ್ಸರ್ ಬಂದರೆ ಬದುಕುವುದೇ ಇಲ್ಲ ಎಂಬ ಅನುಮಾನವೂ ಹಲವರಲ್ಲಿದೆ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ದೊರಕಿದರೆ ಕ್ಯಾನ್ಸರ್ ರೋಗವನ್ನು ಸಹ ಗುಣಪಡಿಸಬಹುದು. ತಂತ್ರಜ್ಞಾನ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯಾಗಿದ್ದು ಪ್ರತಿಯೊಂದು ರೋಗಕ್ಕೂ ಸೂಕ್ತ ಚಿಕಿತ್ಸೆ ಲಭ್ಯವಿದೆ.