ಬೆಂಗಳೂರು:ರಾಜ್ಯದಲ್ಲಿ ಯಾವ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೇರಲು ಬಿಡಲ್ಲ, ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತಂದು ಪ್ರಧಾನಿ ಮೋದಿ ಕನಸು ನನಸು ಮಾಡಲಿದ್ದೇವೆ ಎಂದು ಮಾಜಿ ಸಿಎಂ ಹಾಗೂ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ಬಿಜೆಪಿ ಶಕ್ತಿಯುತವಾಗಿ ಬೆಳೆಯದ ಸಂದರ್ಭದಲ್ಲಿ ಸುಧಾಕರ್ ಮತ್ತು ಇತರ ನಾಯಕರ ಕಾರಣದಿಂದ ಲಕ್ಷಾಂತರ ಜನ ಸೇರಿದ್ದಾರೆ. ಇವರೆಲ್ಲರ ಪರಿಶ್ರಮದಿಂದ ಈ ಭಾಗದಲ್ಲಿ ಹೆಚ್ಚಿನ ಶಾಸಕರು ಗೆದ್ದು, 150 + ಶಾಸಕರ ಗೆದ್ದು ಮತ್ತೆ ಸರ್ಕಾರ ರಚನೆಯ ವಿಶ್ವಾಸ ವ್ಯಕ್ತಪಡಿಸಿದರು.
ನೇಕಾರರು ಮತ್ತು ರೈತರು ನಮ್ಮ ಪಕ್ಷಕ್ಕೆ ಎರಡು ಕಣ್ಣುಗಳಿದ್ದಂತೆ. ನಾನು ಅಧಿಕಾರದಲ್ಲಿದ್ದಾಗ ನೇಕಾರ, ರೈತರ ಸಾಲ ಮನ್ನ ಮಾಡಿದ್ದೆ, ನನ್ನ ಜೀವನದ ಸಾಕಷ್ಟು ಸಮಯ ರೈತರಿಗಾಗಿ ಮೀಸಲಿಟ್ಟಿದ್ದೆ, ನಾವು ರೈತರಿಗೆ ಕೊಟ್ಟಷ್ಟು ಯೋಜನೆ ಬೇರೆ ಯಾವ ರಾಜ್ಯದಲ್ಲಿಯೂ ಕೊಟ್ಟಿಲ್ಲ, ಕಿಸಾನ್ ಸಮ್ಮಾನ್ ಅಡಿ ಕೇಂದ್ರ 6 ನಾವು 4 ಸಾವಿರ ಸೇರಿ ಹತ್ತು ಸಾವಿರ ಕೊಡುತ್ತಿದ್ದೇವೆ ಎಂದರು.
ರಾಹುಲ್ ಗಾಂಧಿ ಇಂದು ಬಡತನದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಅವರ ಕುಟುಂಬದ ಮೂವರು ಪ್ರಧಾನಿ ಆದರು. ಆದರೆ, ಬಡತನ ಹೋಯಿತಾ? ಆದರೆ ಮೋದಿ ಬಂದ ನಂತರ ರೈತರು ನೆಮ್ಮದಿಯಾಗಿ ಬದುಕುವಂತೆ ಮಾಡಿದ್ದೇವೆ. ಬೋಟ್ನಲ್ಲಿ ಓಡಾಡುವ ಸ್ಥಿತಿ ಬಂತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬೋಟ್ನಲ್ಲಿ ಓಡಾಡೋ ಸ್ಥಿತಿ ಎಂದರೆ ಯಾವ ಪರಿ ಮಳೆ ಬಂತು ಎಂದು ಗೊತ್ತಿಲ್ಲವೇ? ಅಧಿವೇಶನದಲ್ಲಿ ಇದಕ್ಕೆಲ್ಲಾ ತಕ್ಕ ಉತ್ತರ ನೀಡಲಿದ್ದೇವೆ ಎಂದು ತಿಳಿಸಿದರು.
ಹಣ ಹೆಂಡ, ತೋಳ್ಬಲ, ಅಧಿಕಾರ ಬಲದಿಂದ ಜಾತಿಯ ವಿಷಬೀಜ ಬಿತ್ತಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಿದೆ. ಸ್ವಾಭಿಮಾನದಿಂದ ಬಾಳಿ ಬದುಕುವ ವ್ಯವಸ್ಥೆ ಮೋದಿ ಮಾಡಿದ್ದಾರೆ. ಮೋದಿ ಪ್ರಧಾನಿ ಆಗಿರುವವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದಿದ್ದೆ, ಈಗಲೂ ಹೇಳುತ್ತಿದ್ದೇನೆ. ಕರ್ನಾಟಕದಲ್ಲಿ ನೀವು ಅಧಿಕಾರಕ್ಕೆ ಬರಲು ಬಿಡಲ್ಲ, 150 ಸ್ಥಾನ ಗೆದ್ದು ಮೋದಿ ಕನಸು ನನಸು ಮಾಡಲಿದ್ದೇವೆ ಎಂದರು.