ಬೆಂಗಳೂರು:ಪ್ರಿಯಕರನಿಗೆ ಮದುವೆಯಾಗಿರುವ ಸುದ್ದಿ ಗೊತ್ತಾಗುತ್ತಿದ್ದಂತೆ ಮಹಿಳೆ ಯುವಕನ ಮುಖಕ್ಕೆ ಬಿಸಿ ನೀರು ಎರಚಿದ್ದಲ್ಲದೇ, ಬಾಟಲಿಯಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಿರುವ ಘಟನೆ ಮೇ 26 ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಲಬುರಗಿಯ ವಿಜಯಶಂಕರ ಆರ್ಯ ಗಾಯಾಳು. ಅಫಜಲಪುರ ಮೂಲದ ಜ್ಯೋತಿ ದೊಡ್ಡಮನಿ ಆರೋಪಿ ಎಂದು ತಿಳಿದುಬಂದಿದೆ.
ಘಟನೆಯ ವಿವರ:ಚಾಮರಾಜಪೇಟೆಯ ಬೋರೋ ಕ್ಲಾತಿಂಗ್ನಲ್ಲಿ ಎಡಿಟಿಂಗ್ ಕೆಲಸ ಮಾಡಿಕೊಂಡಿದ್ದ ವಿಜಯಶಂಕರ ಎಂಬಾತನಿಗೆ ನಾಲ್ಕು ವರ್ಷಗಳ ಹಿಂದೆ ಅಫಜಲಪುರದ ಜ್ಯೋತಿ ಪರಿಚಯವಾಗಿ, ಪ್ರೇಮಾಂಕುರವಾಗಿತ್ತು. ಎರಡು ವರ್ಷಗಳ ಹಿಂದೆ ಜ್ಯೋತಿಗೆ ಮದುವೆಯಾಗಿದೆ ಎಂಬ ವಿಚಾರ ತಿಳಿದ ವಿಜಯಶಂಕರ ಆಕೆಯಿಂದ ಅಂತರ ಕಾಯ್ದುಕೊಂಡಿದ್ದ. ಇದಾದ ನಂತರ ಬೆಂಗಳೂರಿಗೆ ಬಂದು ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಕೆಲಸ ಮಾಡಿಕೊಂಡಿದ್ದ. ಹೀಗಾಗಿ ಜ್ಯೋತಿಗೆ ತಾನು ವಾಸವಿದ್ದ ಚಾಮರಾಜಪೇಟೆಯ ಎಂ.ಡಿ.ಬ್ಲಾಕ್ನಲ್ಲಿರುವ ಬಾಡಿಗೆ ರೂಮ್ ಬಿಟ್ಟುಕೊಟ್ಟಿದ್ದ.
ಬೊಮ್ಮಸಂದ್ರ ಬಳಿಯ ಯಾರಂಡಳ್ಳಿಯಲ್ಲಿ ಸ್ನೇಹಿತನ ಜೊತೆಗೆ ವಿಜಯಶಂಕರ ವಾಸವಿದ್ದ. ಮೇ 5 ರಂದು ಬೇರೆ ಯುವತಿಯೊಂದಿಗೆ ವಿಜಯಶಂಕರನಿಗೆ ಮದುವೆಯಾಗಿದೆ. ಮೇ 23 ರಂದು ಪುನಃ ವಿಜಯಶಂಕರ ಬೆಂಗಳೂರಿಗೆ ಬಂದಿದ್ದಾನೆ. ಈತನನ್ನು ಮೇ 25 ರಂದು ಸಂಜೆ ಬರ್ತ್ ಡೇ ಸಿದ್ಧತೆಗೆ ಸಹಾಯ ಮಾಡುವಂತೆ ಜ್ಯೋತಿ ತನ್ನ ರೂಮಿಗೆ ಕರೆಸಿಕೊಂಡಿದ್ದಳು.