ಬೆಂಗಳೂರು:ನನ್ನ ಪತಿ ಲಿಪ್ಸ್ಟಿಕ್ ಹಾಕಿ ಮಹಿಳೆಯರ ಒಳ ಉಡುಪು ಧರಿಸುತ್ತಿದ್ದರು ಎಂದು ಆರೋಪಿಸಿ ಪತ್ನಿಯು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಹಿಳೆಯರ ಉಡುಪು ಧರಿಸಿ ವಿಚಿತ್ರವಾಗಿ ವರ್ತಿಸುವುದಲ್ಲದೆ ವರದಕ್ಷಿಣೆ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಗಂಡ ಹಾಗೂ ಆತನ ಮನೆಯವರ ವಿರುದ್ಧ ಹೆಂಡತಿ ದೂರು ನೀಡಿದ್ದಾರೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮ್ಯಾಟ್ರಿಮೊನಿ ವೆಬ್ಸೈಟ್ನಲ್ಲಿ ಪರಸ್ಪರ ಪರಿಚಯ: 25 ವರ್ಷದ ಮಹಿಳೆ ನೀಡಿದ ದೂರು ಆಧರಿಸಿ ಆಕೆಯ ಪತಿ, ಮಾವ ಹಾಗೂ ಅತ್ತೆಯ ವಿರುದ್ಧ ವರದಕ್ಷಿಣೆ ಕಿರುಕುಳದಡಿ ಪ್ರಕರಣ ದಾಖಲಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಮ್ಯಾಟ್ರಿಮೊನಿ ವೆಬ್ಸೈಟ್ ಮುಖಾಂತರ ಮಹಿಳೆಗೆ ಆತ ಪರಿಚಯಗೊಂಡಿದ್ದ. ತಾನು ಎಂಟೆಕ್ ಮಾಡಿದ್ದು ಒಳ್ಳೆ ಕೆಲಸದಲ್ಲಿ ಇರುವುದಾಗಿ ಹೇಳಿಕೊಂಡಿದ್ದ. ಕ್ರಮೇಣ ಗುರು-ಹಿರಿಯರ ಸಮ್ಮುಖದಲ್ಲಿ 2020ರಲ್ಲಿ ಒಪ್ಪಿ ಇಬ್ಬರು ಮದುವೆಯಾಗಿದ್ದರು. ವರದಕ್ಷಿಣೆ ರೂಪವಾಗಿ 800 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ಹಾಗೂ ಐದು ಲಕ್ಷ ಹಣ ನೀಡಲಾಗಿತ್ತು.
ವಿವಾಹವಾದ ಫಸ್ಟ್ ನೈಟ್ನಲ್ಲಿ ತನ್ನ ಗಂಡ ಕನ್ನಡಿ ಮುಂದೆ ನಿಂತು ಲಿಪ್ಸ್ಟಿಕ್ ಹಾಕಿಕೊಂಡಿದ್ದ. ಬಳಿಕ ಮಹಿಳೆಯರ ಒಳ ಉಡುಪು ಧರಿಸಿದ್ದ. ಇದನ್ನ ಪ್ರಶ್ನಿಸಿದರೆ? ತನಗೆ ಗಂಡಸರು ಎಂದರೆ ತುಂಬಾ ಇಷ್ಟ ಎಂದಿದ್ದಾನೆ. ಇದೇ ವೇಳೆ ಲಾಕ್ಡೌನ್ ಆದ ಹಿನ್ನೆಲೆಯಲ್ಲಿ ಗಂಡನ ವಿಚಾರವಾಗಿ ಪ್ರತಿದಿನ ಜಗಳವಾಗುತಿತ್ತು. ಅತ್ತೆ-ಮಾವ ಸಹ ತನಗೆ ಜಿರಳೆ ಔಷಧಿ ಸಿಂಪಡಿಸಿ ಅನಾರೋಗ್ಯಕ್ಕೆ ಕಾರಣವಾಗಿದ್ದರು. ಪ್ರತಿದಿನ ಪತಿಯ ವಿಚಿತ್ರ ವರ್ತನೆ ಹೆಚ್ಚಾಗಿದ್ದರಿಂದ ಆಸ್ಪತ್ರೆಗೆ ತೋರಿಸಲು 10 ಲಕ್ಷ ಹಣ ತೆಗೆದುಕೊಂಡು ಬರುವಂತೆ ಪೀಡಿಸುತ್ತಿದ್ದರು. ಕಿರುಕುಳ ತಾಳಲಾರದೆ ಮನೆಯಿಂದ ಹೊರಬಂದು ಸೋದರಮಾವನ ಮನೆಯಲ್ಲಿ ವಾಸ್ತವ್ಯ ಹೂಡಿದರೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾಳೆ.