ಬೆಂಗಳೂರು: ಬಿಜೆಪಿ ಆಡಳಿತಾವಧಿಯ ಕೊನೆಯ ಆರು ತಿಂಗಳಲ್ಲಿ ಭೂಮಿ ಮಂಜೂರು ಮಾಡಿರುವುದನ್ನು ಮರುಪರಿಶೀಲಿಸಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು. ವಿಕಾಸಸೌಧದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರು ತಿಂಗಳ ಈಚೆಗೆ ಭೂ ಮಂಜೂರು ಮಾಡಿರುವುದನ್ನು ಮತ್ತೊಮ್ಮೆ ಸಂಪುಟಕ್ಕೆ ತಂದು ಮರುಪರಿಶೀಲಿಸಲಾಗುತ್ತದೆ. ಹೀಗಾಗಿ ತರಾತುರಿಯಲ್ಲಿ ಭೂಮಿ ಮಂಜೂರು ಮಾಡಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.
ಉತ್ತಮ ಸಾಮಾಜಿಕ ಕೆಲಸ ಮಾಡುತ್ತಿದ್ದವರಿಗೆ ಭೂಮಿ ಮಂಜೂರು ಮಾಡಿದ್ದರೆ ಏನೂ ಸಮಸ್ಯೆ ಇಲ್ಲ. ಅರ್ಹರಿಗೆ ಭೂಮಿ ಮಂಜೂರು ಮಾಡಬೇಕಾಗಿದೆ. ಹೀಗಾಗಿ ತರಾತುರಿ ಮಾಡಲಾದ ಎಲ್ಲಾ ಭೂಮಿ ಪರಭಾರೆಯನ್ನು ಮರುಪರಿಶೀಲನೆ ಮಾಡಲಾಗುತ್ತದೆ. ಡಿಸೆಂಬರ್ ಬಳಿಕ ಮಂಜೂರಾದ ಜಮೀನು ಬಗ್ಗೆ ಪರಿಶೀಲಿಸಲು ಸಿಎಂ ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.
ತೀರಾ ಹಿಂದೆ ಆಗಿರುವ ಭೂಮಿ ಮಂಜೂರನ್ನು ಪರಿಶೀಲಿಸುವುದು ಕಷ್ಟ. ನಾವು ಅಭಿವೃದ್ಧಿ ಕಡೆಗೂ ಗಮನ ಹರಿಸಬೇಕಾಗುತ್ತದೆ. ಉತ್ತಮ ಶಿಕ್ಷಣ ಸಂಸ್ಥೆಗೆ ಭೂಮಿ ನೀಡಿದರೆ ಅದನ್ನು ನಾವು ಗೌರವಿಸಬೇಕು. ಎಲ್ಲವನ್ನೂ ರಾಜಕೀಯವಾಗಿ ನೋಡಲು ಆಗುವುದಿಲ್ಲ. ಸೇವಾ ಹಿನ್ನೆಲೆ ಕೂಡ ನೋಡಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.
ಪಿಂಚಣಿ ಮೊಟಕು ಇಲ್ಲ: ಕಂದಾಯ ಇಲಾಖೆಯಡಿ ಬರುವ ಪಿಂಚಣಿ ಕಾರ್ಯಕ್ರಮಗಳ ಪರಿಶೀಲನೆ ಸಭೆ ನಡೆಸಲಾಗಿದೆ. 78 ಲಕ್ಷ ನಾನಾ ರೀತಿಯ ಜನರಿಗೆ ವಿವಿಧ ರೀತಿಯ ಪಿಂಚಣಿ ಸೌಲಭ್ಯ ಇದೆ. ಇದಕ್ಕೆ 10,411 ಕೋಟಿ ಈ ವಾರ್ಷಿಕ ಖರ್ಚು ತಗಲುತ್ತದೆ. ಗೃಹ ಲಕ್ಷ್ಮೀ ಯೋಜನೆ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಮೊಟಕು ಮಾಡಲಾಗುವುದಿಲ್ಲ. ಕೆಲವರು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಹೇಳಿದರು. ಯಾವುದೇ ರೂಪದಲ್ಲಿ ಪಿಂಚಣಿ ಪಡೆದರೆ ಅದನ್ನು ಮೊಟಕು ಮಾಡಲ್ಲ. ಬದಲಾಗಿ ಹೆಚ್ಚುವರಿಯಾಗಿ ಎರಡು ಸಾವಿರ ರೂ ನೀಡಲಾಗುತ್ತದೆ. ಬರ್ತಿರುವ ಸೌಲಭ್ಯ ಮೊಟಕು ಮಾಡಲ್ಲ. ಇದರಿಂದ ಕೆಲವು ಮಹಿಳೆಯರಿಗೆ ಪಿಂಚಣಿ ಸೇರಿ 3,200 ರೂಪಾಯಿ ತಿಂಗಳಿಗೆ ಸಿಗಲಿದೆ. ಈ ನಿಟ್ಟಿನಲ್ಲಿ ಅನಗತ್ಯ ಗೊಂದಲ ಸೃಷ್ಟಿಬೇಡ ಎಂದರು.
ಗೃಹಲಕ್ಷ್ಮಿ ಯೋಜನೆ ಅನುಷ್ಠಾನದ ಹಂತದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಿಎಂ ಮನವಿಯಂತೆ ಸಹಕಾರ ನೀಡಲಾಗುವುದು. ಗೃಹಲಕ್ಷ್ಮಿ ಯೋಜನೆ ಕೋರಿ ಅಂದಾಜು 1.30 ಕೋಟಿ ಅರ್ಜಿ ಮುಂದಿನ ದಿನಗಳಲ್ಲಿ ಬರಬಹುದು. ಈ ನಿಟ್ಟಿನಲ್ಲಿ ನಾಡ ಕಚೇರಿಗಳಲ್ಲಿ ಮೂಲಸೌಕರ್ಯ ವೃದ್ಧಿ ಮಾಡಲು ಕ್ರಮ ವಹಿಸಲಾಗುತ್ತದೆ. ಗೃಹ ಲಕ್ಷ್ಮಿ ಯೋಜನೆಗೆ ಅನುಕೂಲವಾಗುವಂತೆ ನಮ್ಮ ಇಲಾಖೆ ಕ್ರಮ ಕೈಗೊಳ್ಳಲಿದೆ. ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಎಲ್ಲ ಸಹಕಾರ ಕೊಡುವಂತೆ ಸಿಎಂ ಸೂಚನೆ ನೀಡಿದ್ದಾರೆ. ಯುದ್ದೋಪಾದಿಯಲ್ಲಿ ಕೆಲಸ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 898 ನಾಡ ಕಚೇರಿ ಇದೆ. ಅಲ್ಲೆಲ್ಲ ಅರ್ಜಿ ಸ್ವೀಕಾರ ಮಾಡಬೇಕು. ಒಂದು ವಾರದಲ್ಲಿ ಅರ್ಜಿ ಸ್ವೀಕಾರ ಮಾಡುವುದು ಸವಾಲಿನ ವಿಚಾರವಾಗಿದೆ. ಕೆಲವೆಡೆ ಸ್ವಲ್ಪ ವಿಳಂಬವಾಗಬಹುದು. ಜೂ.15ಕ್ಕೆ ನಾಡಕಚೇರಿಯಲ್ಲಿ ಅರ್ಜಿ ಸ್ವೀಕಾರ ಆರಂಭ ಮಾಡುತ್ತೇವೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಹೆಚ್ಚಿನ ಒತ್ತು ಕೊಡುತ್ತೇವೆ. ಗೃಹ ಲಕ್ಷ್ಮಿ ಯೋಜನೆ ಅರ್ಜಿ ವಿಲೇವಾರಿ ಹಿನ್ನೆಲೆ ಬೇರೆ ಸೇವೆಗಳು ಸ್ವಲ್ಪ ಸಮಸ್ಯೆ ಆಗಬಹುದು. ಆ ಬಗ್ಗೆಯೂ ಗಮನ ಹರಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಒಂದೂವರೆ ಕೋಟಿ ಅರ್ಜಿ ಸ್ವೀಕಾರ ಮಾಡಿ ವಿಲೇವಾರಿ ಮಾಡುವುದು ದೊಡ್ಡ ಸವಾಲಿನ ವಿಚಾರ. ಆ ನಿಟ್ಟಿನಲ್ಲಿ ಇಲಾಖೆಯಿಂದ ಪೂರ್ವ ಸಿದ್ಧತೆ ಮಾಡುತ್ತಿದ್ದೇವೆ. ಈ ಸಂಬಂಧ ಸರ್ವರ್ ಅಪ್ ಗ್ರೇಡ್ ಮಾಡಲು ಸಿಎಂ ಇ-ಆಡಳಿತಕ್ಕೆ ಸೂಚನೆ ನೀಡಿದ್ದಾರೆ. ಮೊಬೈಲ್ ಆ್ಯಪ್ ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಕೃಷ್ಣ ಭೈರೇಗೌಡ ಸ್ಪಷ್ಟಪಡಿಸಿದರು.
ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ:ಇದೇ ವಿಚಾರದ ಬಗ್ಗೆ ಮಾತನಾಡಿರುವ ಸಚಿವ ದಿನೇಶ್ ಗುಂಡೂರಾವ್, ''ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಸರ್ಕಾರಿ ಆಸ್ತಿಗಳನ್ನು ಸಂಘ ಪರಿವಾರಕ್ಕೆ ಸೇರಿದ ಹಲವು ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ. ಆದ್ದರಿಂದ, ನಾವು ಆ ಎಲ್ಲಾ ವಿಚಾರಗಳ ಬಗ್ಗೆ ಪರಿಶೀಲನೆ ಮಾಡಬೇಕಿದೆ. ಸರಿಯಾಗಿ, ಕಾನೂನುಬದ್ಧವಾಗಿ ಮಾಡಲಾಗಿದೆಯೇ ಎಂಬ ಬಗ್ಗೆಯೂ ಪರಿಶೀಲಿಸಬೇಕು. ಆದರೆ, ಆರ್ಎಸ್ಎಸ್ ಮತ್ತು ಬಿಜೆಪಿಗೆ ನಿಕಟ ಸಂಪರ್ಕ ಹೊಂದಿರುವ ಸಂಸ್ಥೆಗಳು ಹಾಗೂ ಸಂಸ್ಥೆಗಳಿಗೆ ಸಾಕಷ್ಟು ರಾಜ್ಯ ಸರ್ಕಾರದ ಆಸ್ತಿಗಳನ್ನು ನೀಡಿರುವುದು ಸತ್ಯ'' ಎಂದು ಹೇಳಿದರು.
ಇದನ್ನೂಓದಿ:District incharge ministers: ಜಿಲ್ಲಾ ಉಸ್ತುವಾರಿ ಸಚಿವರ ನೇಮಕ; ಯಾವ ಜಿಲ್ಲೆಗೆ ಯಾರು ಉಸ್ತುವಾರಿ? ಇಲ್ಲಿದೆ ಪಟ್ಟಿ..