ಬೆಂಗಳೂರು:ರಾಜ್ಯ ಬಿಜೆಪಿಗೆ ನೂತನ ಸಾರಥಿಯಾಗಿ ಬಿ ವೈ ವಿಜಯೇಂದ್ರ ನೇಮಕವಾಗಿರುವುದು ಜೆಡಿಎಸ್ನಲ್ಲೂ ಉತ್ಸಾಹ ಹೆಚ್ಚಿದೆ. ಕೆಲ ದಿನಗಳಿಂದಲೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ವಿ. ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್ ಹೆಸರುಗಳು ರಾಜ್ಯಾಧ್ಯಕ್ಷ ಹುದ್ದೆಗೆ ಕೇಳಿ ಬರುತ್ತಿದ್ದವು. ಆದರೆ, ದಿಢೀರ್ ಬೆಳವಣಿಗೆಯಲ್ಲಿ ಹೈಕಮಾಂಡ್ ವಿಜಯೇಂದ್ರ ಅವರ ಹೆಸರನ್ನು ಘೋಷಿಸಿದೆ.
ವರಿಷ್ಠರ ಗೇಮ್ ಪ್ಲಾನ್ ಇದ್ದಕ್ಕಿದ್ದಂತೆ ಬದಲಾಗಲು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕಾರಣ ಇರಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಕಾಂಗ್ರೆಸ್ ಪಕ್ಷವನ್ನು ಎದುರಿಸಲು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧಿ ಮತಗಳನ್ನು ಕನ್ಸಾಲಿಡೇಟ್ ಮಾಡಲು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಸೂಕ್ತವೆಂದು ವರಿಷ್ಠರು ಯೋಚಿಸಿರಬಹುದು. ಈ ರೀತಿಯ ಹೊಂದಾಣಿಕೆಗೆ ಸಂಬಂಧಿಸಿದಂತೆ ಅದು ಒಂದು ಸೂತ್ರವನ್ನು ರಚಿಸಿ ಕುಮಾರಸ್ವಾಮಿ ಅವರಿಗೆ ವಿವರಿಸಿ ಹಲವು ದಿನಗಳೇ ಆಗಿವೆ.
ಕುಮಾರಸ್ವಾಮಿ ಅವರು ಸಹ ಲಿಂಗಾಯತ ನಾಯಕರು ರಾಜ್ಯಾಧ್ಯಕ್ಷರಾದರೆ ಒಳ್ಳೆಯದು ಎಂಬ ಮಾಹಿತಿಯನ್ನು ಬಿಜೆಪಿ ಹೈಕಮಾಂಡ್ ಮುಂದೆ ಇಟ್ಟಿದ್ದರು ಎನ್ನಲಾಗಿದೆ. ಲಿಂಗಾಯತ ಸಮುದಾಯಕ್ಕೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದರಿಂದ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಜವಾಬ್ದಾರಿ ನಿಭಾಯಿಸಲಿರುವ ಶಾಸಕಾಂಗ ಪಕ್ಷದ ನಾಯಕನ ಸ್ಥಾನವನ್ನು ಒಕ್ಕಲಿಗ ಅಥವಾ ಇತರ ಹಿಂದುಳಿದ ವರ್ಗಗಳ ಸಮುದಾಯಕ್ಕೆ (ಒಬಿಸಿ) ನೀಡುವುದು ಬಹುತೇಕ ಖಚಿತವಾಗಿದೆ. ಮೇಲ್ನೋಟಕ್ಕೆ ಒಕ್ಕಲಿಗ ಸಮುದಾಯಕ್ಕೆ ಆದ್ಯತೆ ಸಿಗಬಹುದು ಎಂಬ ಮಾತು ಕೇಳಿಬರುತ್ತಿದ್ದರೂ ಜೆಡಿಎಸ್ ಜೊತೆಗಿನ ಮೈತ್ರಿಯಾಗುವುದು ತೀರ್ಮಾನವಾಗಿರುವ ಹಿನ್ನೆಲೆಯಲ್ಲಿ ಒಬಿಸಿಗೆ ಅವಕಾಶ ನೀಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎಂದು ಹೇಳಲಾಗುತ್ತಿದೆ.
ಒಕ್ಕಲಿಗ ಸಮುದಾಯಕ್ಕೆ ನೀಡುವುದಾದರೆ ಮಾಜಿ ಡಿಸಿಎಂ ಡಾ.ಸಿ. ಎನ್. ಅಶ್ವತ್ಥನಾರಾಯಣ ಹಾಗೂ ಆರ್. ಅಶೋಕ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಅದರಲ್ಲೂ ಅಶ್ವತ್ಥನಾರಾಯಣ ಅವರಿಗೆ ಹೆಚ್ಚು ಅವಕಾಶವಿದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿದೆ. ಇನ್ನು ಒಬಿಸಿ ವರ್ಗವನ್ನು ಪರಿಗಣಿಸುವ ನಿರ್ಧಾರ ಕೈಗೊಂಡಲ್ಲಿ ಮಾಜಿ ಸಚಿವ ವಿ. ಸುನೀಲ್‌ಕುಮಾರ್ ಅವರನ್ನು ಪರಿಗಣಿಸುವ ಸಾಧ್ಯತೆ ಇದೆ.
ಜೆಡಿಎಸ್‌ನಲ್ಲಿ ಸಿ ಎಂ ಇಬ್ರಾಹಿಂ ರಾಜ್ಯಾಧ್ಯಕ್ಷರಾಗಿಯೇ ಮುಂದುವರಿದಿದ್ದರೆ ಮೈತ್ರಿ ಪಾಲನೆ ವಿಚಾರದಲ್ಲಿ ಬಿಜೆಪಿಗೆ ಇರಿಸುಮುರಿಸಾಗುವ ಸಂಭವವಿತ್ತು. ಬಿ ವೈ ವಿಜಯೇಂದ್ರ ಜೊತೆ ಇಬ್ರಾಹಿಂ ಕಾಂಬಿನೇಷನ್ ಅನ್ನು ಬಿಜೆಪಿ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೆ, ಈಗ ಕುಮಾರಸ್ವಾಮಿಯೇ ಜೆಡಿಎಸ್ ರಾಜ್ಯಾಧ್ಯಕ್ಷರಾಗಿರುವ ಕಾರಣದಿಂದ ಎರಡು ಪ್ರಬಲ ಸಮುದಾಯಗಳನ್ನು ಒಗ್ಗೂಡಿಸಲು ಸಾಧ್ಯವಾಗಲಿದೆ ಎಂದು ಲೆಕ್ಕಾಚಾರ ಮಾಡಲಾಗಿದೆ.