ಬೆಂಗಳೂರು: "ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಇದೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಮುಂದಿನ ದಿನಗಳಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆಯಾ ಅಥವಾ ಬೇರೆಯವರ ಸರ್ಕಾರ ಇದೆಯಾ ಎನ್ನುವುದನ್ನು ಯೋಚನೆ ಮಾಡಬೇಕಿದೆ. ನನ್ನ ಪರಿಸ್ಥಿತಿಯೇ ಹೀಗಾದರೆ, ಉಳಿದ ಸಾಮಾನ್ಯ ಕಾರ್ಯಕರ್ತರ ಪರಿಸ್ಥಿತಿ ಏನು ಎನ್ನುವುದು ನನ್ನ ಯೋಚನೆ. ಬಿಜೆಪಿ ಸರ್ಕಾರ ಇದ್ದಾಗ ಮೂರು ಕೇಸ್ ಫೈಲ್ ಮಾಡಿದ್ರು, ಆದರೆ ಇವರು ಯಾಕೆ ಮಾಡಿದ್ದಾರೆ ಎನ್ನುವುದು ಗೊತ್ತಾಗ್ತಿಲ್ಲ" ಎಂದು ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲೂ ಗೋಧ್ರಾ ಮಾದರಿ ಹತ್ಯಾಕಾಂಡ ದಾಳಿ ನಡೆಯಬಹುದು. ನಮ್ಮ ಕರ್ನಾಟಕದಿಂದ ಅಯೋಧ್ಯೆಗೆ ಪ್ರಯಾಣಿಸುವವರಿಗೆ ರಕ್ಷಣೆ ಕೊಡಿ ಎಂಬ ಹೇಳಿಕೆ ನೀಡಿದ ಹಿನ್ನೆಲೆ ಸಿಸಿಬಿ ಪೊಲೀಸರು ಕುಮಾರಕೃಪ ಅತಿಥಿ ಗೃಹದಲ್ಲಿ ವಿಚಾರಣೆಗೆ ಒಳಪಡಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು.
"ಕುಮಾರಕೃಪಾದಲ್ಲಿ ಇದ್ದಾಗ ಹೇಳಿಕೆ ಪಡೆಯಲು ಬಂದಿದ್ದರು. ಸಿಸಿಬಿ ಅಧಿಕಾರಿಗಳ ಯಾವ ಪ್ರಶ್ನೆಗಳಿಗೂ ನಾನು ಉತ್ತರ ನೀಡಿಲ್ಲ. ಠಾಣೆಗೆ ಕರೆದುಕೊಂಡು ಹೋಗಿ, ಅಲ್ಲಿ ಉತ್ತರ ಕೊಡುತ್ತೇನೆ. ಠಾಣೆಗೆ ಕರೆದುಕೊಂಡು ಹೋಗಲು ವಾರೆಂಟ್ ಜೊತೆಗೆ ಬನ್ನಿ ಎಂದು ಹೇಳಿ ಕಳುಹಿಸಿದ್ದೇನೆ. ಸಂಸದ ಅನಂತ್ ಕುಮಾರ್ ಹೆಗಡೆ, ಕಲ್ಲಡಕ್ ಪ್ರಭಾಕರ್ ಭಟ್ ಅವರನ್ನು ರತ್ನಕಂಬಳಿ ಹಾಸಿ ನೋಡಿಕೊಳ್ಳುವಂತೆ, ನನ್ನನ್ನು ನೋಡಿಕೊಳ್ಳಬೇಕೆಂದಿಲ್ಲ. ಯಾವುದೇ ಸಂದರ್ಭದಲ್ಲಿ ಕರೆದರೂ ಬಂದು ಉತ್ತರ ನೀಡಲು ತಯಾರಿದ್ದೇನೆ. ಕೇವಲ ಹೇಳಿಕೆ ಮಾತ್ರವಲ್ಲ, ನಾನು ಮಂಪರು ಪರೀಕ್ಷೆಗೂ ಯತಾರಿದ್ದೇನೆ. ನನ್ನ ಜೊತೆಗೆ ಬಿಜೆಪಿಯ ರಾಜ್ಯಾಧ್ಯಕ್ಷರ ಮಂಪರು ಪರೀಕ್ಷೆಯನ್ನೂ ನಡೆಸಬೇಕು ಎಂದು ಅವರಿಗೆ ಹೇಳಿದ್ದೇನೆ" ಎಂದು ಹೇಳಿದರು.