ಬೆಂಗಳೂರು: ಬಾಂಗ್ಲಾ ವಲಸಿಗರು ಎಂಬ ಅನುಮಾನದಲ್ಲಿ ಬೆಂಗಳೂರು ವರ್ತೂರು ಪೊಲೀಸ್ ಠಾಣೆ ಪೊಲೀಸರಿಂದ ಬಂಧನವಾಗಿ 301 ದಿನಗಳ ಕಾಲ ಸೆರೆವಾಸ ಅನುಭವಿಸಿದ್ದ ಪಶ್ಚಿಮ ಬಂಗಾಳ ಮೂಲದ ದಂಪತಿ ಕೊನೆಗೂ ತಮ್ಮ ತವರಿನತ್ತ ತೆರಳಿದರು. ಫಲಶ್ ಅಧಿಕಾರಿ ಹಾಗೂ ಶುಕ್ಲಾ ಅಧಿಕಾರಿ ದಂಪತಿಗೆ ಬೆಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಜಾಮೀನು ದೊರೆತಿದ್ದು ಬಂಗಾಳಕ್ಕೆ ಕಳುಹಿಸಲಾಗಿದೆ.
ಪಶ್ಚಿಮ ಬಂಗಾಳದ ಪೂರ್ವ ಬುರ್ಧ್ವಾನ್ ನ ಜಮಾಲ್ಪುರ ಮೂಲದವರಾಗಿದ್ದ ಫಲಶ್ ಹಾಗೂ ಶುಕ್ಲಾ ಉದ್ಯೋಗ ಅರಸಿ ತಮ್ಮ ಒಂದೂವರೆ ವರ್ಷದ ಮಗುವಿನೊಂದಿಗೆ ಬೆಂಗಳೂರಿಗೆ ಬಂದಿದ್ದರು. ನಗರದಲ್ಲಿ ತ್ಯಾಜ್ಯ ವಿಂಗಡಣೆ ಕೆಲಸ ಮಾಡಿಕೊಂಡು ಮಾರತ್‌ಹಳ್ಳಿ ಭಾಗದಲ್ಲಿ ವಾಸವಿದ್ದರು. 2022 ರ ಜುಲೈನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು ದಂಪತಿಯನ್ನು ವಿದೇಶಿಗರ ಕಾಯ್ದೆಯಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದರು. ದಂಪತಿ 'ತಾವು ಪಶ್ಚಿಮ ಬಂಗಾಳದ ಜಮಾಲ್ಪುರ ಮೂಲದವರು' ಎಂದು ವಿವರಿಸಲು ಯತ್ನಿಸಿದ್ದರಾದರೂ ಅವರ ಪ್ರಯತ್ನ ವಿಫಲವಾಗಿತ್ತು.