ಬೆಂಗಳೂರು: ಕಾಂಗ್ರೆಸ್ನಲ್ಲಿ ಅನ್ಯಾಯವಾಗಿದೆ ಎಂದು ಹೇಳಿಕೊಂಡು ಬಂದಿದ್ದ ಬಾಬುರಾವ್ ಚಿಂಚನಸೂರ್ ಅವರನ್ನು ಬಿಜೆಪಿ ಗೌರವಯುತವಾಗಿ ನಡೆಸಿಕೊಂಡಿದೆ. ಆದರೂ ಅವರು ಯಾಕೆ ಪಕ್ಷ ಬಿಟ್ಟಿದ್ದಾರೆ ಎಂದು ಗೊತ್ತಿಲ್ಲ. ಯಾರ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಆದರೆ ಬಿಜೆಪಿಗೆ ಯಾರೇ ಬಂದರೂ ಸ್ವಾಗತವಿದೆ. ಅದೇ ರೀತಿ ತಮ್ಮ ಸ್ವಾರ್ಥಕ್ಕಾಗಿ ಯಾರೇ ಹೊರ ಹೋದರೂ ಅವರನ್ನು ತಡೆಯುವುದಿಲ್ಲ ಎಂದು ಪಕ್ಷ ತೊರೆಯುವ ಚಿಂತನೆಯಲ್ಲಿರುವ ನಾಯಕರಿಗೆ ಪರೋಕ್ಷವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟಾಂಗ್ ನೀಡಿದ್ದಾರೆ.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯವಾದಿ ಪಕ್ಷ, ನಮ್ಮ ಪಕ್ಷ ಒಂದು ರೀತಿಯಲ್ಲಿ ಸಮುದ್ರ ಇದ್ದಂತೆ, ಇಲ್ಲಿಗೆ ಯಾರು ಬಂದರೂ ಸ್ವಾಗತವಿದೆ.ಅದೇ ರೀತಿ ಯಾರಾದರೂ ಅವರ ಸ್ವಂತ ಕಾರಣ,ಸ್ವಾರ್ಥಕ್ಕಾಗಿ ಪಕ್ಷ ಬಿಟ್ಟು ಹೋಗುತ್ತಾರೆ ಎಂದರೆ ನಾವು ಯಾರೂ ತಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಚಿಂಚನಸೂರ್ಗೆ ಎಂಎಲ್ಸಿ ಮಾಡಿದೆವು: ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ನಲ್ಲಿ ಅನ್ಯಾಯವಾಗಿದೆ ಎಂದು ಬಿಜೆಪಿಗೆ ಬಂದರು. ನಮ್ಮ ಪಕ್ಷದಲ್ಲಿದ್ದ ಹಿರಿಯರನ್ನು ಬಿಟ್ಟು ನಾವು ಚಿಂಚನಸೂರ್ ಅವರನ್ನು ಎಂಎಲ್ ಸಿ ಮಾಡಿದೆವು. ಆದರೆ ಇವತ್ತು ಅವರು ಪಕ್ಷ ಬಿಟ್ಟು ಹೋಗಿದ್ದಾರೆ ಯಾಕೆ ಹೋಗಿದ್ದಾರೆ ಗೊತ್ತಿಲ್ಲ. ಹಿಂದುಳಿದ ವರ್ಗದ ನಾಯಕರು ನಮ್ಮ ಪಕ್ಷದಲ್ಲಿ ಇದ್ದಾಗ ಗೌರವ ಕೊಟ್ಟಿದ್ದೇವೆ. ಆದರೂ ಅವರು ಹೋಗಿದ್ದಾರೆ, ಅವರು ಖುಷಿಯಾಗಿರಲಿ.
ಆದರೆ ಬಾಬುರಾವ್ ಚಿಂಚನಸೂರ್ ಅವರ ಸಮಾಜ ಬಿಜೆಪಿ ಜೊತೆಯಲ್ಲಿದೆ. ಅವರದ್ದೇ ಜನಾಂಗದ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲಲಿದೆ. ಪರಿಶಿಷ್ಟ ವರ್ಗದ ಮಹಿಳೆಯನ್ನು ದೇಶದ ಅತ್ಯುನ್ನತ ಪದವಿಗೆ ಏರಿಸುವ ಕೆಲಸ ಬಿಜೆಪಿ ಮಾಡಿದೆ. ಆದರೂ ಚಿಂಚನಸೂರ್ ಪಕ್ಷ ಬಿಟ್ಟು ಹೋಗಿದ್ದಾರೆ. ಅವರು ಹೋದರೆ ಹೋಗಲಿ, ಆದರೆ ಚಿಂಚನಸೂರ್ ಗೆ ಬಿಜೆಪಿ ಏನು ಅನ್ಯಾಯ ಮಾಡಿದೆ ಎನ್ನುವುದನ್ನು ಅವರು ಹೇಳಬೇಕು. ಧ್ವನಿ ಇಲ್ಲದ ಸಮಾಜಕ್ಕೆ ಧ್ವನಿಯಾಗಲು ನಾವು ಅವರನ್ನು ಎಂಎಲ್ಸಿ ಮಾಡಿದ್ದೆವು. ಆದರೂ ಅವರು ಹೋಗಿದ್ದಾರೆ ಇನ್ನು ಇದರ ಬಗ್ಗೆ ಹೆಚ್ಚು ಮಾತನಾಡಲ್ಲ ಎಂದರು.
ಉರಿಗೌಡ ನಂಜೇಗೌಡ ಚರ್ಚೆ ಬೇಡ:ಉರಿಗೌಡ,ನಂಜೇಗೌಡ ವಿಚಾರದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ ಎನ್ನುವುದು ಸರಿಯಲ್ಲ. ಉರಿಗೌಡ, ನಂಜೇಗೌಡ ವಿಷಯದ ಬಗ್ಗೆ ಹೆಚ್ಚು ಚರ್ಚೆ ಬೇಡ ಎನ್ನುವುದು ನನ್ನ ಅಭಿಪ್ರಾಯ. ಆದಿಚುಂಚನಗಿರಿ ಪೀಠದ ನಿರ್ಮಲಾನಂದನಾಥ ಶ್ರೀಗಳು ಇದರ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಉರಿಗೌಡ, ನಂಜೇಗೌಡ ಬಗ್ಗೆ ಅಧ್ಯಯನ ಆಗಬೇಕು ಎಂದಿದ್ದಾರೆ. ನಾವು ಕೂಡ ಅದನ್ನೇ ಹೇಳುತ್ತಾ ಇದ್ದೇವೆ ಎಂದು ಅಭಿಪ್ರಾಯ ತಿಳಿಸಿದರು.
ಸುವರ್ಣ ಮಂಡ್ಯ ಕೃತಿಯಲ್ಲಿ ದೇಜಗೌ ಬರೆದಿದ್ದನ್ನು ನಾನು ಹೇಳಿದ್ದೇನೆ ಅಷ್ಟೆ. ದೇಜಗೌ ಉಪಕುಲಪತಿ ಆಗಿದ್ದವರು, ಬಹಳ ದೊಡ್ಡ ಸಾಹಿತಿಗಳು, ಎಲ್ಲರಿಗೂ ಅವರ ಬಗ್ಗೆ ಗೌರವ ಇದೆ. ಆ ಕೃತಿಯ ಬಗ್ಗೆ ಮಾತನಾಡಿದ್ದೆ. ಉರಿಗೌಡ, ನಂಜೇಗೌಡರ ಇತಿಹಾಸದ ಬಗ್ಗೆ ಎಲ್ಲ ಒಟ್ಟಿಗೆ ಸೇರಿ ಸಂಶೋಧನೆ ಮಾಡಬೇಕಾದ ಅಗತ್ಯವಿದೆ. ಈ ವಿಚಾರದ ಬಗ್ಗೆ ಮಾತನಾಡದಂತೆ ಪಕ್ಷದಿಂದ ಯಾರಿಗೂ ಏನೂ ನಿರ್ದೇಶನ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸುಳ್ಳು ಭರವಸೆ: ರಾಹುಲ್ ಗಾಂಧಿಯಿಂದ ನಾಲ್ಕನೇ ಗ್ಯಾರಂಟಿ ಘೋಷಣೆ ಮಾಡಿಸಲಾಗಿದೆ. ಕಾಂಗ್ರೆಸ್‌ನವರ ಗ್ಯಾರಂಟಿಗಳನ್ನು ಎಲ್ಲ ಕಡೆ ನೋಡುತ್ತಿದ್ದೇವೆ.ಈಗಾಗಲೇ 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ 2 ಸಾವಿರ ರೂ., ಪ್ರತಿ ವ್ಯಕ್ತಿಗೆ ಹತ್ತು ಕೆಜಿ ಅಕ್ಕಿ ಘೋಷಣೆ ಮಾಡಿದ್ದಾರೆ.ಅರವತ್ತು ವರ್ಷ ಆಳಿದ ಪಕ್ಷ ಕಾಂಗ್ರೆಸ್, ರಾಜ್ಯದಲ್ಲೂ ಅರವತ್ತು ವರ್ಷ ಆಳ್ವಿಕೆ ಮಾಡಿದೆ.