ಬೆಂಗಳೂರು : ಕರ್ನಾಟಕ ನಗರ ಪಾಲಿಕೆಗಳ ಎರಡನೇ ತಿದ್ದುಪಡಿ ವಿಧೇಯಕಕವನ್ನು ವಿಧಾನ ಪರಿಷತ್ ನಲ್ಲಿ ಅಂಗೀಕಾರವಾಯಿತು.
ಸಚಿವ ಜೆ.ಸಿ. ಮಾಧುಸ್ವಾಮಿ ಪ್ರಸ್ತಾವ ಮಂಡಿಸಿ ಮಾತನಾಡಿ, ತ್ಯಾಜ್ಯ ವ್ಯವಸ್ಥಾಪನೆ ವಿಚಾರ ಸಾಕಷ್ಟು ಪ್ರಕರಣ ನ್ಯಾಯಾಲಯ ಮೆಟ್ಟಿಲೇರಿದೆ. ಹಸಿರು ಪ್ರಾಧಿಕಾರದ ನಿರ್ದೇಶನ ಕೂಡ ಇದೆ. ಕೇಂದ್ರ ಸರ್ಕಾರ ನಿರ್ದೇಶನ ನೀಡಿದ್ದು, ಎರಡು ಲಕ್ಷದವರೆಗೂ ಕೊಂಡೊಯ್ಯಬಹುದು ಎಂದಿದೆ.
ಈ ತಿದ್ದುಪಡಿಯಿಂದ ನಗರಪಾಲಿಕೆಗಳಿಗೆ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಮಾಡದಿದ್ದರೆ ಎರಡು ಲಕ್ಷದವರೆಗೂ ದಂಡ ವಿಧಿಸುವ ಅವಕಾಶ ಇರಲಿದೆ. ತ್ಯಾಜ್ಯ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಲಿದೆ. 1 ಸಾವಿರ ರೂ. ಇದ್ದ ದಂಡವನ್ನು 2 ಲಕ್ಷ ರೂ. ವರೆಗೂ ವಿಧಿಸುವ ಅವಕಾಶ ನಗರಪಾಲಿಕೆಗೆ ನೀಡಲಿದ್ದೇವೆ. ಹೇಗೆ ಕಸ ವರ್ಗೀಕರಿಸಬೇಕು, ಸಂಗ್ರಹಿಸಬೇಕು ಹಾಗೂ ಎಷ್ಟು ದಂಡ ವಿಧಿಸಬೇಕೆಂಬ ನಿರ್ಧಾರ ನಗರಪಾಲಿಕೆ ಕೈಗೊಳ್ಳಲಿದೆ ಇದನ್ನು ಅನುಮೋದಿಸಬೇಕು ಎಂದು ಮನವಿ ಮಾಡಿದರು.
ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಮಾತನಾಡಿ, ಕಸ ವಿಲೇವಾರಿ ನಗರದಲ್ಲಿ ದೊಡ್ಡ ಮಾಫಿಯಾ ಆಗಿದೆ. ಇದರ ಮಟ್ಟಹಾಕುವ ಕೆಲಸ ಮಾಡಬೇಕು. ಇಲ್ಲವಾದರೆ ಎಷ್ಟೇ ದಂಡ ವಿಧಿಸಿದರೂ ಅದಕ್ಕೆ ಪ್ರಯೋಜನ ಇರಲ್ಲ ಎಂದರು.
ಸದಸ್ಯರಾದ ಪಿ.ಆರ್. ರಮೇಶ್, ನಾರಾಯಣಸ್ವಾಮಿ ಮಾತನಾಡಿ, ಎಲ್ಲಿಯೂ ಸಮಸ್ಯೆ ಆಗದ ರೀತಿ, ಅತ್ಯಂತ ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸಲಹೆ ನೀಡಿದರು.
ವಿಧೇಯಕವನ್ನು ಧ್ವನಿಮತದ ಮೂಲಕ ವಿಧಾನ ಪರಿಷತ್ ನಲ್ಲಿ ಅಂಗೀಕರಿಸಲಾಯಿತು.