ಕರ್ನಾಟಕ

karnataka

ETV Bharat / state

ನಿಯಮ ಉಲ್ಲಂಘಿಸಿದರೆ ಪೊಲೀಸ್ ಫೋರ್ಸ್ ಬಳಕೆ: ಸಚಿವ ಬೊಮ್ಮಾಯಿ ಎಚ್ಚರಿಕೆ..! - ಲಾಕ್​​ಡೌನ್ ನಿಯಮ ಉಲ್ಲಂಘಿಸಿದರೆ ಪೊಲೀಸ್ ಫೋರ್ಸ್ ಬಳಕೆ

ರಾಜ್ಯಾದ್ಯಂತ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು, ಇದನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಸಿಲಿಕಾನ್​ ಸಿಟಿಯಲ್ಲಿ ಲಾಕ್​ಡೌನ್​ ಜಾರಿ ಮಾಡಲಾಗಿದೆ. ಜಾರಿಯಲ್ಲಿರುವ ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘಿಸಿದರೆ ಪೊಲೀಸ್​ ಫೋರ್ಸ್​ ಬಳಕೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

Basavaraj Bommai
ಬಸವರಾಜ ಬೊಮ್ಮಾಯಿ

By

Published : Jul 15, 2020, 12:27 PM IST

ಬೆಂಗಳೂರು: ಮಧ್ಯಾಹ್ನ 12 ಗಂಟೆ ನಂತರ ಯಾವುದೇ ಕಾರಣಕ್ಕೂ ಯಾರೂ ಹೊರಗೆ ಬರಬಾರದು. ನಿಯಮ ಉಲ್ಲಂಘಿಸಿದರೆ ಪೊಲೀಸ್ ಫೋರ್ಸ್ ಬಳಕೆ ಮಾಡಬೇಕಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ

ಆರ್.ಟಿ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರ, ಗ್ರಾಮಾಂತರದಲ್ಲಿ ಲಾಕ್​​ಡೌನ್ ಕಟ್ಟುನಿಟ್ಟಿನ ಪಾಲನೆ ಮಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ವಾಹನ, ಜನಸಂಚಾರ ನಿಯಂತ್ರಣದ ಸಲುವಾಗಿ ಹಲವಾರು ಬ್ಯಾರಿಕೇಡ್​​ಗಳನ್ನು ಹಾಕಲಾಗಿದೆ. 12 ಗಂಟೆವರೆಗೂ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದೇವೆ. ವಾಹನದಟ್ಟಣೆ ಕಡಿಮೆ ಇದ್ದು, ಲಾಕ್​ಡೌನ್​ ವಾತಾವರಣ ಈಗಾಗಲೇ ನಿರ್ಮಾಣವಾಗಿದೆ. ಜನರಿಗೂ ಕೂಡ ಇದರ ಅರಿವಾಗಿದೆ ಎಂದರು.

ಈ ಲಾಕ್​​ಡೌನ್ ಬಹಳ ಮಹತ್ವದ್ದಾಗಿದ್ದು, ಕಳೆದ ಬಾರಿ ಇಷ್ಟು ದೊಡ್ಡ ಮಟ್ಟದಲ್ಲಿ ಸೋಂಕಿರಲಿಲ್ಲ. ಆದರೆ, ಈಗ ಪರಿಸ್ಥಿತಿ ಬೇರೆ ಇದೆ. ಅತಿ ಹೆಚ್ಚು ಸೋಂಕಿತರಿರುವ ಭಾಗದಲ್ಲಿ ಲಾಕ್​​ಡೌನ್ ಜಾರಿ ಮಾಡಲಾಗಿದೆ. ಕೊರೊನಾ ಸೋಂಕು ನಿಯಂತ್ರಿಸಲು ಜನರು ಸಹಕಾರ ನೀಡಬೇಕಾಗಿದೆ. ವೈದ್ಯಕೀಯ ಸೇವೆ, ಆಹಾರ ಸೇರಿದಂತೆ ತುರ್ತು ಸೇವೆಗೆ ಮಾತ್ರ ಅವಕಾಶ ಕಲ್ಪಿಸುವಂತೆ ಸೂಚಿಸಲಾಗಿದೆ. ಎಲ್ಲರಿಗೂ ಸಹಕಾರ ಆಗುವ ರೀತಿಯಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಬಾರಿ ಲಾಕ್​​ಡೌನ್ ಯಶಸ್ವಿಯಾಗಬೇಕಾದರೆ ಜನರ ಸಹಕಾರ ಮುಖ್ಯ. ಜನರು ಸ್ವಯಂಪ್ರೇರಿತ ಲಾಕ್​ಡೌನ್ ಆದರೆ ಮಾತ್ರ ಯಶಸ್ವಿಯಾಗಲಿದೆ ಎಂದು ಜನರ ಸಹಕಾರ ಕೋರಿದರು.

ಮಧ್ಯಾಹ್ನ 12ರ ನಂತರ ಯಾರಿಗೂ ಯಾವುದೇ ಅವಕಾಶವಿಲ್ಲ. ಅಷ್ಟರೊಳಗೆ ಜನ ತಮಗೆ ಬೇಕಿರುವ ಅಗತ್ಯ ವಸ್ತುಗಳನ್ನು ಖರೀದಿಸಬೇಕು. ವೈರಾಣು ಕಟ್ಟಿ ಹಾಕಲು ಕನಿಷ್ಠ 18 ತಾಸು ಸಮಯ ಬೇಕಿದೆ. ಹಾಗಾಗಿ 12 ಗಂಟೆಗೆ ನಿಯಂತ್ರಣ ಮಾಡಿದ್ದೇವೆ. ಯಾರು ನಿಯಮಾವಳಿ ಉಲ್ಲಂಘನೆ ಮಾಡುತ್ತಾರೋ ಅನಿವಾರ್ಯವಾಗಿ ನಾವು ಪೊಲೀಸ್ ಫೋರ್ಸ್ ಬಳಕೆ ಮಾಡಬೇಕಾಗಲಿದೆ. ಅದಕ್ಕೆ ಅವಕಾಶ ಮಾಡಬೇಡಿ. ಪೊಲೀಸ್ ಫೋರ್ಸ್ ಅನ್ನು ಬಳಕೆ ಮಾಡಿ ನಿಯಂತ್ರಣ ಮಾಡುವ ಸ್ಥಿತಿ ನಿರ್ಮಾಣವಾಗಬಾರದು. ಆ ರೀತಿ ಜನ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ABOUT THE AUTHOR

...view details