ಬೆಂಗಳೂರು:ಮೊದಲ ಸಚಿವ ಸಂಪುಟ ಸಭೆಯಲ್ಲೇ ಗ್ಯಾರಂಟಿ ಜಾರಿಯ ಭರವಸೆ ನೀಡಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಕರ್ನಾಟಕದ ಜನತೆಯ ನಿರೀಕ್ಷೆಯನ್ನು ಹುಸಿಗೊಳಿಸಿದೆ, ಕಾಂಗ್ರೆಸ್ ಕುಂಟು ನೆಪಗಳ ವಿರುದ್ಧ ವಿಧಾನಸಭೆಯಲ್ಲಿ ನಾವು ಧ್ವನಿ ಎತ್ತುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಆರ್.ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದ ಬಗ್ಗೆ ಕರ್ನಾಟಕದ ಮಹಾಜನತೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಹೆಣ್ಣು ಮಕ್ಕಳು ಇವತ್ತೇ ಬಸ್ ಹತ್ತಲು ತಯಾರಾಗಿದ್ದರು. ಆದರೆ, ಸಿದ್ದರಾಮಯ್ಯ ಅವರಿಗೆ ನಿರಾಶೆ ಮೂಡಿಸಿದ್ದಾರೆ. ಕೇವಲ ಘೋಷಣೆ ಮಾತ್ರ ಮಾಡಲಾಗಿದ್ದು, ಎಂದಿನಿಂದ ಜಾರಿ ಅಂತ ವಿವರವಾಗಿ ಹೇಳಿಲ್ಲ ಎಂದರು.
ಮುಂದಿನ ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಹೇಳುತ್ತೇವೆ ಎಂದಿದ್ದಾರೆ. ಇದರಿಂದ ಜನರ ನಿರೀಕ್ಷೆ ಹುಸಿಗೊಳಿಸುವ ಸಂಪುಟ ನಿರ್ಣಯ ಆಗಿದೆ. ಐದು ಗ್ಯಾರೆಂಟಿ ಈಡೇರಿಕೆಗೆ 50 ಸಾವಿರ ಕೋಟಿ ಆಗುತ್ತದೆ ಎಂದು ಹೇಳಿದ್ದಾರೆ. ಇದರಿಂದಾಗಿ ಹಣಕಾಸು ಒದಗಿಸಲು ಯಾವುದೇ ಪೂರ್ವ ಆಲೋಚನೆ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ದಾರಿಯಲ್ಲಿ ಹೋಗುವವರಿಗೆ ಕೊಡಲು ಆಗುತ್ತಾ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ದಾರಿಯಲ್ಲಿದ್ದವರು, ಮನೆಯಲ್ಲಿದ್ದವರು ಎಲ್ಲರೂ ಸೇರಿಯೇ ವೋಟ್ ಹಾಕಿದ್ದಾರೆ. ಚುನಾವಣೆಯಲ್ಲಿ ಗೆದ್ದ ಬಳಿಕ ಈಗ ಮತದಾರರಿಗೆ ಎಷ್ಟು ಗೌರವ ಕೊಡುತ್ತಿದ್ದಾರೆ ಎಂದು ಗೊತ್ತಾಗುತ್ತಿದೆ. ಕಾಂಗ್ರೆಸ್ ನಿಧಾನವಾಗಿ ತನ್ನ ಬಣ್ಣ ಬದಲಾಯಿಸುತ್ತಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಮನಸ್ಸು ಮಾಡಿದರೆ ನಾಳೆಯೇ 2000ರೂ. ಹಾಕಬಹುದು. ಬಿಪಿಎಲ್ ಕಾರ್ಡ್ದಾರರ ಬಗ್ಗೆ ರಾಜ್ಯ ಸರ್ಕಾರದ ಬಳಿ ಈಗಾಗಲೇ ಮಾಹಿತಿ ಇದೆ. ಮನಸ್ಸಿದ್ದರೆ ಮಾತ್ರ ಮಾರ್ಗ ಎಂದ ಮಾಜಿ ಸಿಎಂ, ವಿದ್ಯುತ್ ಉಚಿತ ನೀಡಲು ಕುಂಟು ನೆಪ ಹೇಳುತ್ತಿದ್ದಾರೆ. ಈ ವರ್ಷ ಪಾಸಾದ ಪದವೀಧರರಿಗೆ ಭತ್ಯೆ ಅಂತ ಹೇಳಿದ್ದಾರೆ. ನಿಜವಾದ ಕಷ್ಟದಲ್ಲಿರುವ ನಿರುದ್ಯೋಗಿಗಳಿಗೆ ಸಹಾಯ ಮಾಡುವ ಉದ್ದೇಶ ಇವರಿಗಿಲ್ಲ ಎಂದರು.