ಬೆಂಗಳೂರು:ಬೆಂಗಳೂರುಉತ್ತರ ತಾಲೂಕು ಕಸಬಾ ಹೋಬಳಿ ನಾಗವಾರ ಗ್ರಾಮದ ಸರ್ವೇ ನಂಬರ್ 135/1 ರಲ್ಲಿ ಬಿಎಂಆರ್ಸಿಎಲ್ ಸ್ವಾಧೀನಪಡಿಸಿಕೊಂಡಿರುವ ಸರ್ಕಾರಿ ಜಮೀನಿನ ಪರಿಹಾರವನ್ನು ಖಾಸಗಿ ವ್ಯಕ್ತಿಗೆ 24 ಕೋಟಿ ರೂ ಪಾವತಿಸಿ ಅಕ್ರಮ ಎಸಗಲಾಗಿದೆ ಎಂಬ ಆರೋಪವಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಅದೇ ರೀತಿ ಬೊಮ್ಮನಹಳ್ಳಿಯ ಭೂ ಕಬಳಿಕೆ ತೆರವಿಗೆ ಕ್ರಮ ವಹಿಸಲಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಬೆಂಗಳೂರು ಉತ್ತರ ತಾಲೂಕು ಕಸಬಾ ಹೋಬಳಿ ನಾಗವಾರ ಗ್ರಾಮದ ಸರ್ವೇ ನಂಬರ್ 135/1 ರಲ್ಲಿ ಬಿಡಿಎ ವಶಪಡಿಸಿಕೊಂಡಿರುವ 20 ಗುಂಟೆ ಜಾಗದಲ್ಲಿ ಮೆಟ್ರೋ ಮಾರ್ಗ ಹಾದು ಹೋಗುತ್ತಿದೆ.
ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಆ ಜಾಗವನ್ನು ಬಿಎಂಆರ್ಸಿಎಲ್ ಸ್ವಾಧೀನಪಡಿಸಿಕೊಂಡಿದೆ. ಬಿಡಿಎಗೆ ಬಂದ ನಂತರ ಅದು ಸರ್ಕಾರದ ಜಾಗ ಆ ಸರ್ಕಾರಿ ಜಾಗಕ್ಕೆ ಪರಿಹಾರವಾಗಿ ಖಾಸಗಿ ವ್ಯಕ್ತಿಗೆ 24 ಕೋಟಿ ಹಣ ಪಾವತಿ ಮಾಡಿದ್ದಾರೆ ಎನ್ನುವ ಆರೋಪ ಮಾಡಲಾಗಿದೆ. ಈ ಬಗ್ಗೆ ತನಿಖೆ ಮಾಡಿಸಲಾಗುತ್ತದೆ. ಸರ್ಕಾರದ ಒಂದು ರೂಪಾಯಿಯನ್ನೂ ಬಿಡಲ್ಲ ಎಂದರು.
ಬೊಮ್ಮನಹಳ್ಳಿಯಲ್ಲಿ ಸಾವಿರ ಕೋಟಿ ಆಸ್ತಿ ಕಬಳಿಕೆ ಮಾಡಲಾಗುತ್ತಿದೆ ಎನ್ನುವ ಆರೋಪವನ್ನು ಸದಸ್ಯರು ಮಾಡಿದ್ದಾರೆ. ಭೂ ಪರಿವರ್ತನೆಯಾಗಿ ನಿವೇಶನಗಳಾಗಿ ಹಂಚಿಕೆಯಾಗಿ 40 ವರ್ಷವಾದರೂ, ಮಾಲೀಕರ ಸ್ವಾಧೀನಕ್ಕೆ ಬಿಡುತ್ತಿಲ್ಲ. ಖಾಸಗಿಯವರು ರೌಡಿಗಳನ್ನಿಟ್ಟುಕೊಂಡು ಬೇಲಿ ಹಾಕಿ ಕಬಳಿಸಿದ್ದಾರೆ ಎಂದಿದ್ದಾರೆ.
ಬಿಡಿಎನಲ್ಲಿ ಅವ್ಯವಹಾರಗಳ ವ್ಯಾಪ್ತಿಯಲ್ಲಿ ತನಿಖೆಗೊಳಪಡಿಸಲು ಪ್ರಾಮಾಣಿಕ ಅಧಿಕಾರಿಗಳ ಟಾಸ್ಕ್ ಪೋರ್ಸ್ ತಂಡ ರಚಿಸಿ ಎಂದಿದ್ದಾರೆ. ಈಗಾಗಲೇ ಟಾಸ್ಕ್ ಪೋರ್ಸ್ ರಚನೆಯನ್ನು ಒಂದು ಕ್ಷೇತ್ರಕ್ಕೆ ಮಾಡುತ್ತಿದೆ. ನಿನ್ನೆ ಪಾಪ ಬೆಂಗಳೂರಿನ ಶಾಸಕರೊಬ್ಬರು ಒಂದಕ್ಕೆ ಏಕೆ, ಇಡೀ ಬೆಂಗಳೂರಿನದ್ದು ತನಿಖೆ ಮಾಡಿಸಿ ಎಂದಿದ್ದಾರೆ. ಖಂಡಿತ ಟಾಸ್ಕ್ ಪೋರ್ಸ್ ರಚನೆ ಮಾಡಿ ತನಿಖೆ ನಡೆಸುತ್ತೇವೆ ಎಂದು ಭರವಸೆ ನೀಡಿದರು.
ಮದ್ಯ ಪರವಾನಗಿ ಸ್ಥಳಾಂತರಕ್ಕೆ ಬ್ರೇಕ್: ಮದ್ಯ ಮಾರಾಟಕ್ಕೆ ಗ್ರಾಮೀಣ ಭಾಗದ ಪರವಾನಗಿ ಪಡೆದುಕೊಂಡು ನಂತರ ಪಟ್ಟಣಗಳಿಗೆ ಹೋಗಿ ಮದ್ಯ ಮಾರಾಟ ಮಳಿಗೆ ತೆರೆಯುವುದನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ನಗರದಲ್ಲಿ ಪರವಾನಗಿ ಪಡೆದು ಹಳ್ಳಿಗಳಿಗೆ ತೆರಳಲೂ ನಿರ್ಬಂಧ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಅಬಕಾರಿ ಸಚಿವ ತಿಮ್ಮಾಪೂರ ಸ್ಪಷ್ಟಪಡಿಸಿದ್ದಾರೆ.