ಬೆಂಗಳೂರು: ಕೇಂದ್ರ ಸರ್ಕಾರ ಎಲ್ಲಾ ವರ್ಗ, ಜಾತಿ, ಧರ್ಮದವರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕೇ ಹೊರತು ಯಾವುದೇ ವರ್ಗ, ಧರ್ಮದವರನ್ನು ಗುರಿಯಾಗಿಸಬಾರದು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಡಿಕೆಶಿ, ಪೌರತ್ವ ತಿದ್ದುಪಡಿ ಕಾಯ್ದೆ ದೇಶದ ಹಿತಾಸಕ್ತಿ ಹಾಗೂ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು, ಇಲ್ಲಿ ಯಾವುದೇ ಪ್ರಜೆ ತಾನು ಪ್ರಾರ್ಥನೆ ಮಾಡುವ ದೇವರನ್ನು, ಅನುಸರಿಸುವ ಧರ್ಮವನ್ನು ಆಯ್ಕೆ ಮಾಡುವುದು ಆತನ ಸ್ವಾತಂತ್ರ್ಯಕ್ಕೆ ಬಿಟ್ಟಿದ್ದು. ಹೀಗಾಗಿ ಸರ್ಕಾರವಾಗಲೀ, ಯಾವುದೇ ಪಕ್ಷವಾಗಲೀ ದೇಶದ ಜನರನ್ನು ಇಂತಹುದೇ ಧರ್ಮ ಪಾಲಿಸುವಂತೆ ಬಲವಂತ ಹೇರುವಂತಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ನಡೆ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದ್ದು, ನಾಚಿಕೆಗೇಡಿನ ವಿಚಾರವೆಂದು ಟೀಕಿಸಿದ್ರು.
ಅಸ್ಸೋಂ ಹಾಗೂ ದೇಶದ ಇತರೆ ಭಾಗಗಳಲ್ಲಿ ಅಂತರ್ಜಾಲ ಸೌಕರ್ಯವನ್ನು ಕಡಿತಗೊಳಿಸಿ ಪ್ರಧಾನಿಗಳು ಶಾಂತಿ ಕಾಪಾಡುವಂತೆ ಅಂತರ್ಜಾಲದಲ್ಲಿ ಸಂದೇಶ ರವಾನಿಸುತ್ತಾರೆ. ಈ ಸಂದೇಶ ಅವರಿಗೆ ಹೇಗೆ ತಲುಪುತ್ತದೆ? ನನ್ನ ಪ್ರಕಾರ, ದೇಶದ ಪ್ರತಿಯೊಬ್ಬರಿಗೂ ಪ್ರತಿಭಟನೆ ಮಾಡುವ ಅಧಿಕಾರವಿದೆ. ಸಾಮಾನ್ಯ ಪ್ರಜೆ ತನ್ನ ಧ್ವನಿಯನ್ನು ಎತ್ತುವುದೇ ಇಂತಹ ಸಂದರ್ಭದಲ್ಲಿ. ಹೀಗಾಗಿ ಪ್ರಜಾಪ್ರಭುತ್ವದಲ್ಲಿ ಇದಕ್ಕೆ ಅವಕಾಶವಿದೆ ಎಂದು ಪ್ರತಿಭಟನೆಗಳನ್ನು ಸಮರ್ಥಿಸಿಕೊಂಡರು.