ಬೆಂಗಳೂರು :ನವೆಂಬರ್ ತಿಂಗಳ 17ರ ಒಳಗೆ ರಾಮಜನ್ಮ ಭೂಮಿ ಹಾಗೂ ಬಾಬ್ರಿ ಮಸೀದಿಯ ವಿವಾದ ಕುರಿತು ಸುಪ್ರೀಂಕೋರ್ಟ್ ಅಂತಿಮ ತೀರ್ಪು ಹೊರ ಬರಲಿದ್ದು, ತೀರ್ಪು ಯಾರ ಪರ ಬಂದರೂ, ತೀರ್ಪನ್ನು ಒಪ್ಪಿಕೊಳ್ಳಬೇಕು. ಶಾಂತಿ- ಸೌಹಾರ್ದತೆಯಿಂದ ಬದುಕಬೇಕೆ ಹೊರತು ಗಲಭೆ ಸೃಷ್ಟಿಸಬಾರದೆಂದು ಕರ್ನಾಟಕ ಸೌಹಾರ್ದ ಸಮಿತಿ ಮನವಿ ಮಾಡಿದೆ.
ಕರ್ನಾಟಕ ಸೌಹಾರ್ದ ಸಮಿತಿಯಿಂದ ಸುದ್ದಿಗೋಷ್ಠಿ
ಈ ಸಮಿತಿಯ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ವಿ.ಗೋಪಾಲಗೌಡ, ನ್ಯಾ.ಎನ್ ಸಂತೋಷ್ ಹೆಗ್ಡೆ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಹ್ಮದ್ ಅನ್ವರ್, ಹಿರಿಯ ಸಾಹಿತಿಗಳಾದ ಡಾ.ಬರಗೂರು ರಾಮಚಂದ್ರಪ್ಪ, ಡಾ.ಕೆ.ಮರುಳಸಿದ್ಧಪ್ಪ, ಡಾ.ಕೆ ಶರೀಫಾ, ರಂಗಕರ್ಮಿ ಪ್ರಸನ್ನ ಅವರು ಸುದ್ದಿಗೋಷ್ಠಿ ನಡೆಸಿ ಶಾಂತಿಯುತ ವಾತಾವರಣ ಕಾಯುವಂತೆ ಕರೆಕೊಟ್ಟರು.
ಜೊತೆಗೆ ಕಾನೂನು-ಸುವ್ಯವಸ್ಥೆಯ ಮೂಲಕ ರಾಜ್ಯ-ದೇಶದಲ್ಲಿರುವ ಸರ್ಕಾರಕ್ಕೆ ನಡೆಯಬಹುದಾದ ಅವಘಡ ತಡೆಯುವ ಜವಾಬ್ದಾರಿಯಿದೆಯೆಂದು ಹಿರಿಯ ಸಾಹಿತಿ ಡಾ.ಕೆ.ಮರುಳಸಿದ್ದಪ್ಪ ತಿಳಿಸಿದರು. ಅಲ್ಲದೇ, ದೇಶದ ಮುಂದೆ , ಅಭಿವೃದ್ಧಿ, ಆರ್ಥಿಕ, ಉದ್ಯೋಗದ ಸಮಸ್ಯೆ , ಸವಾಲುಗಳಿವೆ. ಇವೆಲ್ಲ ಬಿಟ್ಟು ಬೇರೆ ವಿಚಾರಕ್ಕೆ ದೇಶ ಮಹತ್ವ ನೀಡ್ತಿರೋದು ನಮಗೆ ಆತಂಕದ ವಿಷಯವಾಗಿದೆಯೆಂದು ಅಸಮಾಧಾನ ಹೊರಹಾಕಿದರು.
ಇನ್ನೂ, ಈ ವೇಳೆ ಮಾತನಾಡಿದ ನ್ಯಾ. ವಿ ಗೋಪಾಲಗೌಡ, ಎಲ್ಲಾ ಮತೀಯ ಜನರು ಶಾಂತಿ ಸೌಹಾರ್ದತೆ ಕಾಪಾಡಬೇಕೆಂಬ ಉದ್ದೇಶದಿಂದ ಕರ್ನಾಟಕ ಸೌಹಾರ್ದ ಸಮಿತಿ ರಚನೆ ಮಾಡಿದ್ದೇವೆ. ಎಲ್ಲಾ ಜಾತಿ ಧರ್ಮದ ಜನರು ಸಹೋದರ ಸಹೋದರಿಯರಂತೆ ಒಗ್ಗಟ್ಟಾಗಿರಬೇಕು. ದೇಶದ ಹಿತದೃಷ್ಟಿಯಿಂದ, ಅಭಿವೃದ್ಧಿ ದೃಷ್ಟಿಯಿಂದ ಸುಪ್ರೀಂ ಕೋರ್ಟ್ ತೀರ್ಪನ್ನು ಒಪ್ಪಬೇಕು, ಗೌರವಿಸಬೇಕು ಎಂದರು. ಹಾಗೆಯೇ, ನ್ಯಾ.ಮಹ್ಮದ್ ಅನ್ವರ್ ಮಾತನಾಡಿ, ಬಾಬ್ರಿ ಮಸೀದಿಯ ತೀರ್ಪುಏನೇಬಂದರೂ, ಶಾಂತಿ ಕಾಪಾಡಬೇಕು. ಎಲ್ಲಾ ಪಕ್ಷಗಳೂ , ಜನರೂ ಒಪ್ಪಿಕೊಳ್ಳಬೇಕೆಂದರು.
ರಂಗಕರ್ಮಿ ಪ್ರಸನ್ನ ಅವರು ಮಾತನಾಡಿ, ಕೋಮುಸೌಹಾರ್ದವು ದೇಶ ಕಟ್ಟುವ ಪ್ರಮುಖ ವಿಚಾರವಾಗಿದೆಯೆಂದು ಹೇಳಿದರೆ, ಸಾಹಿತಿ, ಡಾ.ಬರಗೂರು ರಾಮಚಂದ್ರಪ್ಪ ಮಾತನಾಡಿ, ಧರ್ಮಗುರುಗಳು, ಸಾಮಾಜಿಕ ನಾಯಕರು ಸೌಹಾರ್ದಯುತ ಕರ್ನಾಟಕ ಮಾಡಲು ಒಗ್ಗೂಡಬೇಕು ಎಂದರು. ಬೆಂಗಳೂರು ವಕೀಲರ ಸಂಘದ ಪರವಾಗಿ ಮಾತನಾಡಿದ ಅಧ್ಯಕ್ಷ, ಎ.ಪಿ ರಂಗನಾಥ್, ವಕೀಲ ಸಂಘದಿಂದ ಸಮ್ಮತ ಇದೆ. ಶಾಂತಿ, ಸೌಹಾರ್ದತೆ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಅಡಿಯಲ್ಲಿ ನೀಡುವ ತೀರ್ಪಿಗೆ ಬದ್ಧರಾಗಿರುತ್ತೇವೆಂದರು.