ಬೆಂಗಳೂರು: ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸಿಂದಗಿಯಲ್ಲಿ ಮಾತ್ರ ಗೆಲುವಿನ ನಿರೀಕ್ಷೆ ಹೊಂದಿದೆ. ಹಾನಗಲ್ ತಮ್ಮ ಪಾಲಿಗೆ ಒಲಿಯುವುದು ಕಷ್ಟ ಎನ್ನುವ ತೀರ್ಮಾನಕ್ಕೆ ನಾಯಕರು ಬಂದಿದ್ದಾರೆ ಎನ್ನಲಾಗುತ್ತಿದೆ.
ಒಂದೆಡೆ ಜೆಡಿಎಸ್ ಪಕ್ಷ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇನ್ನೊಂದೆಡೆ, ಬಿಜೆಪಿ ಅಧಿಕಾರ ಬಲ ಪ್ರದರ್ಶಿಸುತ್ತಿದೆ. ಈ ನಡುವೆ ಕಾಂಗ್ರೆಸ್ಗೆ ಹಾನಗಲ್ನಲ್ಲಿ ಕೊಂಚ ಅಸಮಾಧಾನವೂ ತೊಡಕಾಗಿದೆ ಎನ್ನಲಾಗುತ್ತಿದ್ದು, ಸಿಂದಗಿಯಲ್ಲಿ ಮಾತ್ರ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ತಂದೆ ಎಂ.ಸಿ. ಮನಗೂಳಿ ಹೆಸರು ಮುಂದಿಟ್ಟುಕೊಂಡು ಅವರ ಪುತ್ರ ಅಶೋಕ್ ಮನಗೂಳಿ ಕಳೆದ ಕೆಲ ವರ್ಷಗಳಿಂದ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಾ ಬಂದಿದ್ದಾರೆ. ಇದೀಗ ಎಲ್ಲಾ ಕಡೆ ಇವರಿಗೆ ಅನುಕೂಲಕರವಾದ ವಾತಾವರಣ ಗೋಚರಿಸುತ್ತಿದ್ದು, ಅವರೇ ಗೆದ್ದರೂ ಗೆಲ್ಲಬಹುದು ಎನ್ನುವ ಮಾತು ಕೇಳಿಬರುತ್ತಿದೆ.
ಜೆಡಿಎಸ್ ಸದಸ್ಯರಾಗಿದ್ದ ಮಾಜಿ ಸಚಿವ ಎಂ.ಸಿ.ಮನಗೂಳಿ ನಿಧನದಿಂದ ತೆರವಾಗಿರುವ ಸಿಂದಗಿ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಅವರ ಪುತ್ರ ಅಶೋಕ್ ಮನಗೂಳಿ ಕಣಕ್ಕಿಳಿದಿದ್ದಾರೆ. ತಿಂಗಳುಗಳ ಹಿಂದೆಯೇ ಇವರೇ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿತ್ತು. ಇದರಿಂದಾಗಿ ಕ್ಷೇತ್ರದಲ್ಲಿ ಪೂರಕ ವಾತಾವರಣ ಕಲ್ಪಿಸಿಕೊಳ್ಳಲು ಅವಕಾಶವಿತ್ತು.
1957 ರಿಂದ ಇದುವರೆಗೂ ನಡೆದ ಚುನಾವಣೆಗಳ ಪೈಕಿ ಸಿಂದಗಿ ಕ್ಷೇತ್ರವನ್ನು ಗಮನಿಸಿದರೆ ಇಲ್ಲಿ ಅತಿ ಹೆಚ್ಚು ಅಂದರೆ 8 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದೆ. 1957, 1962, 1967, 1972, 1978, 1985, 1989 ಮತ್ತು 1999 ರಲ್ಲಿ ಗೆಲುವು ದಾಖಲಿಸಿದೆ.