ಕರ್ನಾಟಕ

karnataka

ETV Bharat / state

200ಕ್ಕೂ ಹೆಚ್ಚಿನ ಕ್ಲರ್ಕ್‍ಗಳಿಗೆ ನೆರವು ನೀಡಿದ್ದೇವೆ: ಹೈಕೋರ್ಟ್​ಗೆ ವಕೀಲರ ಪರಿಷತ್‍ ಮಾಹಿತಿ

ಲಾಕ್​ಡೌನ್​ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ 200ಕ್ಕೂ ಹೆಚ್ಚಿನ ಕ್ಲರ್ಕ್​ಗಳಿಗೆ ತಲಾ 5000 ರೂ. ಪರಿಹಾರ ನೀಡಿದ್ದೇವೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್​ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.

ಹೈಕೋರ್ಟ್
ಹೈಕೋರ್ಟ್

By

Published : Jul 1, 2020, 10:12 PM IST

ಬೆಂಗಳೂರು:ಲಾಕ್‍ಡೌನ್ ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ 200ಕ್ಕೂ ಹೆಚ್ಚು ಕ್ಲರ್ಕ್‍ಗಳಿಗೆ ತಲಾ 5 ಸಾವಿರ ರೂಪಾಯಿ ಪರಿಹಾರವನ್ನು ನೀಡಿದ್ದೇವೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್​​​ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.

ನೆರವು ಕೋರಿ ಕರ್ನಾಟಕ ರಾಜ್ಯ ವಕೀಲರ ಕ್ಲರ್ಕ್‍ಗಳ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು. ಈ ವೇಳೆ ರಾಜ್ಯ ವಕೀಲರ ಪರಿಷತ್ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವಕೀಲರ ಕ್ಲರ್ಕ್‍ಗಳಿಗೆ ನೆರವು ನೀಡಲಾಗಿದೆ.

ಪರಿಹಾರ ಕಲ್ಪಿಸಲು ನೇಮಿಸಿದ್ದ ಹಿರಿಯ ನ್ಯಾಯವಾದಿ ಡಿ.ಎಲ್.ಎನ್.ರಾವ್ ನೇತೃತ್ವದ ಸಮಿತಿ ಅನುಮೋದಿಸಿದ 204 ಕ್ಲರ್ಕ್‍ಗಳಿಗೆ ತಲಾ 5 ಸಾವಿರ ರೂಪಾಯಿ ಹಣ ಬಿಡುಗಡೆ ಮಾಡಲಾಗಿದೆ. ಮುಂದಿನ ಒಂದೆರಡು ದಿನಗಳಲ್ಲಿ ಅವರ ಬ್ಯಾಂಕ್ ಖಾತೆಗೆ ಹಣ ಜಮೆ ಆಗಲಿದೆ. ನೆರವು ನೀಡಲು ಸಂಗ್ರಹಿಸಿದ್ದ ಹಣದಲ್ಲಿ ಈವರೆಗೆ 10.20 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದ್ದು, 13.44 ಲಕ್ಷ ರೂ. ಹಣ ಉಳಿದಿದೆ. ಇನ್ನೂ 22 ಅರ್ಜಿಗಳು ಅನುಮೋದನೆಗೆ ಬಾಕಿ ಇವೆ ಎಂದು ಮಾಹಿತಿ ನೀಡಿದರು.

ಅರ್ಜಿದಾರರ ಪರ ವಕೀಲ ಮೂರ್ತಿ ಡಿ. ನಾಯಕ್ ವಾದಿಸಿ, ನೆರವು ಕೋರಿ ಧಾರವಾಡದಿಂದ 38 ಹಾಗೂ ಕಲಬುರಗಿಯಿಂದ 28 ಕ್ಲರ್ಕ್‍ಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ನ್ಯಾಯ ಪೀಠದ ಗಮನಕ್ಕೆ ತಂದರು. ಅದಕ್ಕೆ, ಧಾರವಾಡ ಹೈಕೋರ್ಟ್ ಪೀಠ ಹಾಗೂ ಕಲಬುರಗಿ ಹೈಕೋರ್ಟ್ ಪೀಠದ ವಕೀಲರ ಪರಿಷತ್‍ನ ಪದಾಧಿಕಾರಿಗಳನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಸೇರಿಸಲು ಅರ್ಜಿದಾರರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

ABOUT THE AUTHOR

...view details