ಬೆಂಗಳೂರು: ಕರ್ನಾಟಕ ರಾಜ್ಯ ಸವಿತಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸವಿತಾ ಸಮಾಜದ ಅಧ್ಯಕ್ಷರಾದ ಸಂಪತ್, ಸವಿತಾ ಸಮಾಜದ ಅಭಿವೃದ್ಧಿಗೆ ಸರ್ಕಾರ ಸಹಕಾರ ನೀಡಬೇಕು. ನಮ್ಮ ಸಮುದಾಯದ ಜನರಿಗೆ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ, ಹಾಗೂ ನಮ್ಮ ಸಮುದಾಯ ಭವನದಲ್ಲಿ ಸದ್ಯ ಪಿಯುಸಿ ಕಾಲೇಜ್ ಇದ್ದು, ಪದವಿ, ಕಾನೂನು ಹಾಗೂ ನರ್ಸಿಂಗ್ ಕಾಲೇಜು ಆರಂಭಿಸಬೇಕು ಎಂಬ ಹತ್ತು ಬೇಡಿಕೆಗಳುಳ್ಳ ಮನವಿ ಪತ್ರವನ್ನು ವೇದಿಕೆಯಲ್ಲಿ ಉಪ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.
ಸವಿತಾ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸಹಕಾರವಿದೆ: ಡಿಸಿಎಂ ಅಶ್ವತ್ಥ್ ನಾರಾಯಣ್ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಡಿಸಿಎಂ ಅಶ್ವತ್ಥ್ ನಾರಾಯಣ್, ನಮ್ಮ ಸಮಾಜಕ್ಕೆ ಸವಿತಾ ಸಮಾಜದ ಕೊಡುಗೆ ಅಪಾರವಾಗಿದೆ. ಅಲ್ಲದೆ ಯಾವುದೇ ಜನಾಂಗದ ಶುಭ ಕಾರ್ಯಗಳಲ್ಲಿ ನಾದಸ್ವರ ನುಡಿಸುವ ಮೂಲಕ ಸವಿತಾ ಸಮಾಜದವರು ಚಾಲನೆ ನೀಡುತ್ತಾರೆ. ನಮ್ಮ ಸೌಂದರ್ಯ ಹೆಚ್ಚಿಸುವಲ್ಲಿ ಸವಿತಾ ಸಮುದಾಯದ ಕೊಡುಗೆ ಅಪಾರವಾಗಿದೆ. ಒಂದು ವೇಳೆ ಸವಿತಾ ಸಮಾಜದ ಬಾಂಧವರು ಇಲ್ಲದಿದ್ದರೆ ನಾವುಗಳು ಕಾಡಿನಲ್ಲಿ ವಾಸಿಸುವ ಪ್ರಾಣಿಗಳಂತೆ ಇರಬೇಕಾಗಿತ್ತು.
ಸವಿತಾ ಸಮುದಾಯದ ಅಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಸಿದ್ಧವಿದೆ. ನಿಮ್ಮ ಬೇಡಿಕೆಯಂತೆ ಶೀಘ್ರದಲ್ಲೇ ಸವಿತಾ ಸಮಾಜದ ಅಭಿವೃದ್ಧಿ ನಿಗಮ ಮಂಡಳಿಗೆ ಸವಿತಾ ಸಮಾಜದ ಮುಖಂಡರನ್ನೆ ಅಧ್ಯಕ್ಷರಾಗಿ ನೇಮಕ ಮಾಡಲು ಕ್ರಮ ಕೈಗೋಳ್ಳುತ್ತೇವೆ. ಪದವಿ ಕಾಲೇಜು ಬೇಕು ಎಂದು ಮನವಿ ಸಲ್ಲಿಸಿದ್ದೀರಿ. ನಾನು ಉನ್ನತ ಶಿಕ್ಷಣ ಮಂತ್ರಿಯಾಗಿದ್ದು, ನಿಮ್ಮ ಬೇಡಿಕೆಯನ್ನು ಖಂಡಿತಾ ನೆರವೇರಿಸುತ್ತೇನೆ. ಸವಿತಾ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸರ್ಕಾರದಿಂದ ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂಬ ಭರವಸೆಯನ್ನು ವೇದಿಕೆಯಲ್ಲೇ ನೀಡಿದರು.