ಬೆಂಗಳೂರು: ಒಂದು ವರ್ಷ ಕಾಲ ಅನಧಿಕೃತವಾಗಿ ಗೈರಾಗಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಶಾಲೆಯೊಂದರ ದ್ವಿತೀಯ ದರ್ಜೆ ನೌಕರ (ಎಸ್‌ಡಿಎ)ನ ವಿರುದ್ಧ ಯಾವುದೇ ರೀತಿ ಶಿಸ್ತುಕ್ರಮಕ್ಕೆ ಮುಂದಾಗದಿರುವುದನ್ನು ಪರಿಗಣಿಸಿರುವ ಹೈಕೋರ್ಟ್, ನೌಕರ ಗೈರಾಗಿದ್ದ ಅವಧಿಗೆ ವೇತನ ಪಾವತಿಸುವಂತೆ ಶಾಲಾ ಮುಖ್ಯೋಪಾಧ್ಯಾಯರಿಗೆ ಆದೇಶಿಸಿದೆ.
ಅನಧಿಕೃತವಾಗಿ ರಜೆ ಹಾಕಿದ್ದರೂ ಎಸ್‌ಡಿಎ ಉದ್ಯೊಗಿ ಎನ್.ಎಸ್. ಕಾಂತರಾಜುಗೆ ವೇತನ ಪಾವತಿಸಲು ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ ಸೂಚನೆ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ನಗರದ ದೊಡ್ಡಬೊಮ್ಮಸಂದ್ರದ ಶ್ರೀ ರಾಘವೇಂದ್ರ ಆಶ್ರಮ ಶಾಲೆಯ ಮುಖ್ಯೋಪಾಧ್ಯಾಯರು ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ನೇತೃತ್ವದ ವಿಭಾಗೀಯ ಪೀಠ, ಎಸ್ಡಿಎಗೆ ವೇತನ ನೀಡುವಂತೆ ಸೂಚನೆ ನೀಡಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ ಏನು?:ನಗರದ ಭಗಿನಿ ನಿವೇದಿತಾ ಹೈಸ್ಕೂಲ್‌ನಲ್ಲಿ ಎಸ್‌ಡಿಎ ನೌಕರನಾಗಿದ್ದ ಕಾಂತರಾಜು ಅನ್ನು ಶಿಕ್ಷಣ ಇಲಾಖೆಯು 2009ರಲ್ಲಿ ಶ್ರೀ ರಾಘವೇಂದ್ರ ಆಶ್ರಮ ಶಾಲೆಗೆ ವರ್ಗಾಯಿಸಿತ್ತು. ಆ ಶಾಲೆಯಲ್ಲಿ 2009ರ ಫೆ.2ರಂದು ಕರ್ತವ್ಯಕ್ಕೆ ಹಾಜರಾಗಿದ್ದ ಕಾಂತರಾಜು, ನಂತರದ ಒಂದು ವರ್ಷ ಕಾಲ (2009ರ ಫೆ.2ರಿಂದ 2020ರ ಫೆ.15ರವರೆಗೆ) ಗೈರಾಗಿದ್ದರು. ಬಳಿಕ ಉದ್ಯೋಗಕ್ಕೆ ಮರಳಿದ್ದರು.
2014ರ ಮಾ.14 ಮತ್ತು ಸೆ.30ರಂದು ಬೆಂಗಳೂರು ಉತ್ತರ ತಾಲೂಕಿನ ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದ ಕಾಂತರಾಜು, 2009ರ ಫೆ.2ರಿಂದ 2020ರ ಫೆ.15ರವರೆಗೆ ನಾನು ರಜೆಯ ಮೇಲೆ ತೆರಳಿದ್ದೆ. ಆದರೆ, ನಾನು ಅನಧಿಕೃತವಾಗಿ ಹಾಜರಾಗಿದ್ದೇನೆ ಎಂದು ತಿಳಿಸಿ ಶಾಲೆ ನನಗೆ ವೇತನ ನೀಡಿಲ್ಲ. ಆದ್ದರಿಂದ ವೇತನ ಮತ್ತು ಭತ್ಯೆ ಪಾವತಿಸಲು ಆದೇಶಿಸುವಂತೆ ಕೋರಿದ್ದರು. ಈ ಮನವಿ ಪತ್ರವನ್ನು ಪರಿಗಣಿಸದಕ್ಕೆ 2015ರಲ್ಲಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠ, ಕಾಂತರಾಜು ನಿರ್ದಿಷ್ಟ ಸಮಯದಲ್ಲಿ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರಾಗಿದ್ದರೆ ರಾಘವೇಂದ್ರ ಆಶ್ರಯದ ಶಾಲಾ ಮುಖ್ಯೋಪಾಧ್ಯಾಯರು ಶಿಸ್ತು ಕ್ರಮ ಜರುಗಿಸಬೇಕಿತ್ತು. ಆದರೆ, ಈವರೆಗೂ ಅದನ್ನು ನಿರ್ವಹಿಸಿಲ್ಲ. ಮುಖ್ಯಪಾಧ್ಯಾಯರು ಕಾಂತರಾಜು ಗೈರಾಗಿದ್ದ ದಿನಗಳ ಸಂಬಂಧ ಕೇವಲ ಎರಡು ತಿಂಗಳಿಗಷ್ಟೇ ಬಿಲ್ ನೀಡಿದ್ದಾರೆ. ಉಳಿದ ದಿನಗಳಿಗೆ ಬಿಲ್ ಸೃಜನೆ ಮತ್ತು ರಜೆ ಮಂಜೂರಾತಿ ವಿಚಾರದಲ್ಲಿ ಏನು ಮಾಡಬೇಕೆಂದು ಶಿಕ್ಷಣಾಧಿಕಾರಿ ಬಳಿ ಕೇಳಿಲ್ಲ. ಇದರಿಂದ ಮುಖ್ಯೋಪಾಧ್ಯಾಯರ ಕಡೆಯಿಂದ ಲೋಪ ಉಂಟಾಗಿದೆ. ಆದ್ದರಿಂದ ಶೇ.8ರಷ್ಟು ಬಡ್ಡಿದರದಲ್ಲಿ ಕಾಂತರಾಜುಗೆ ವೇತನ ಪಾವತಿಸುವಂತೆ ಮುಖ್ಯಪಾಧ್ಯಾಯರಿಗೆ 2020ರ ಡಿ.2ರಂದು ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಮುಖ್ಯೋಪಾಧ್ಯಾಯರು ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ವಜಾಗೊಳಿಸಿರುವ ವಿಭಾಗೀಯ ಪೀಠ, ಕಾಂತರಾಜು ಅನಧಿಕೃತವಾಗಿ ಗೈರಾಗಿದ್ದ ಅವಧಿಗೆ ಶಿಸ್ತುಕ್ರಮ ಜರುಗಿಸಬೇಕಿತ್ತು. ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಗೈರಾಗಿದ್ದಾನೆ ಎಂದು ತೀರ್ಮಾನಿಸಲಾಗದು. ಉದ್ಯೋಗಿಯು ಸೇವೆಯಲ್ಲಿ ಮುಂದುವರಿಯುವವರೆಗೆ, ವೇತನ ಪಡೆಯಲು ಆತ ಅರ್ಹನರಾಗಿರುತ್ತಾನೆ. ಆದ್ದರಿಂದ ಕಾಂತರಾಜುಗೆ ವೇತನ ಪಾವತಿಸಬೇಕು ಎಂದು ನಿರ್ದೇಶಿಸಿದೆ.
ಇದನ್ನೂ ಓದಿ:ಶಾಸಕ ರೇಣುಕಾಚಾರ್ಯ ವಿರುದ್ಧದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್