ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನಿಂದ 1.50 ಲಕ್ಷಕ್ಕೂ ಹೆಚ್ಚು ಅಲ್ಪಸಂಖ್ಯಾತ ಮತದಾರರ ಹೆಸರು ಅಕ್ರಮ ಸೇರ್ಪಡೆ: ಎನ್ ಆರ್ ರಮೇಶ್ - ಬಿಜೆಪಿ ಹಾಗೂ ಕಾಂಗ್ರೆಸ್​ ಪರಸ್ಪರ ಪ್ರತ್ಯಾರೋಪ

ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಹಾಗೂ ಕಾಂಗ್ರೆಸ್​ ಪರಸ್ಪರ ಪ್ರತ್ಯಾರೋಪದಲ್ಲಿ ತೊಡಗಿದ್ದು, ವೋಟರ್ ಲಿಸ್ಟ್ ವಾರ್ ತಾರಕಕ್ಕೇರಿದೆ.

BJP unit president NR Ramesh
ಎನ್.ಆರ್.ರಮೇಶ್

By

Published : Nov 19, 2022, 1:46 PM IST

Updated : Nov 19, 2022, 3:15 PM IST

ಬೆಂಗಳೂರು:ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವೋಟರ್ ಲಿಸ್ಟ್ ವಾರ್ ಜೋರಾಗಿದೆ. ಮತದಾರರ ಪಟ್ಟಿಯಲ್ಲಿನ ವ್ಯತ್ಯಾಸದ ಬಗ್ಗೆ ಉಭಯ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿವೆ. ಇತ್ತ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಎನ್ ಆರ್ ರಮೇಶ್ ಕಾಂಗ್ರೆಸ್ ನಾಯಕರ ಮತದಾರರ ಪಟ್ಟಿಯಲ್ಲಿ ಅಕ್ರಮ ಎಸಗಿರುವ ಬಗ್ಗೆ ಆರೋಪಿಸಿದ್ದಾರೆ.

ಈ ಸಂಬಂಧ ವೀಡಿಯೋ ಮೂಲಕ ಮಾತನಾಡಿರುವ ಅವರು, ಈ ಹಿಂದೆಯೇ 2020ರ ಜನವರಿ 3 ರಂದು ಮುಖ್ಯ ಚುನಾವಣಾಧಿಕಾರಿಗಳನ್ನು, ಚುನಾವಣಾ ಆಯುಕ್ತರನ್ನು ಮತ್ತು ಬಿಬಿಎಂಪಿ ಆಯುಕ್ತರನ್ನು ಖುದ್ದಾಗಿ ಭೇಟಿ ಮಾಡಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಹೊಂದಿಕೊಂಡಂತಿರುವ ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಧರ್ಮಪುರಿ ಹಾಗೂ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ಮತ್ತು ಬಂಗಾರಪಾಳ್ಯ ಭಾಗಗಳಿಂದ ಸುಮಾರು 1.50 ಲಕ್ಷಕ್ಕೂ ಹೆಚ್ಚು ಅಲ್ಪಸಂಖ್ಯಾತ ಸಮುದಾಯದ ಜನರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ 27 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವ ಆಘಾತಕಾರಿ ಅಂಶಗಳ ಬಗ್ಗೆ ದಾಖಲೆಗಳ ಸಹಿತ ದೂರನ್ನು ಸಲ್ಲಿಸಿದ್ದೇನೆ ಎಂದಿದ್ದಾರೆ.

ಎನ್.ಆರ್.ರಮೇಶ್

ಮುಂಬರುವ ಬಿಬಿಎಂಪಿ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಹುತೇಕ ಸ್ಥಾನಗಳನ್ನು ಗೆಲ್ಲಬೇಕೆಂಬ ದುರುದ್ದೇಶದಿಂದ ಕಾಂಗ್ರೆಸ್ ಪಕ್ಷದ ಮುಖಂಡರು 27 ವಿಧಾನಸಭಾ ಕ್ಷೇತ್ರಗಳ ಬಿಬಿಎಂಪಿ ವಾರ್ಡ್​ಗಳ ವ್ಯಾಪ್ತಿಯಲ್ಲಿ ಹೊರರಾಜ್ಯಗಳ ಅಲ್ಪಸಂಖ್ಯಾತ ಸಮುದಾಯದವರನ್ನು ಇಲ್ಲಿನ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದಾರೆ. ಈ ಸಂಬಂಧ ಪಾಲಿಕೆಯ ವಿಶೇಷ ಆಯುಕ್ತರು (ಕಂದಾಯ) ಮತ್ತು ಜಂಟಿ ಆಯುಕ್ತರು (ಕಂದಾಯ)ಗೂ ದೂರುಗಳನ್ನು ಸಲ್ಲಿಸಲಾಗಿದೆ ಎಂದು ಹೇಳಿದರು.

2018ರ ಫೆಬ್ರವರಿ ತಿಂಗಳಿನಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 7 ವಾರ್ಡ್​ಗಳಲ್ಲಿ ಹೊರ ರಾಜ್ಯಗಳ ಸುಮಾರು 9,500ಕ್ಕೂ ಹೆಚ್ಚು ಮತದಾರರನ್ನು ಸೇರ್ಪಡೆ ಮಾಡುವ ಸಂಚನ್ನು ಅಂದಿನ ಕಾಂಗ್ರೆಸ್​ ನಾಯಕರು ಹೂಡಿದ್ದರು. ಕಾಂಗ್ರೆಸ್ ಪಕ್ಷದ ನಾಯಕರು ಡಾಟಾ ಎಂಟ್ರಿ ಆಪರೇಟರ್​ಗಳು, ಕಂದಾಯ ವಸೂಲಿಗಾರರು, ಕಂದಾಯ ಪರಿವೀಕ್ಷಕರು ಮತ್ತು ಸಹಾಯಕ ಕಂದಾಯ ಅಧಿಕಾರಿಗಳನ್ನು ತಮ್ಮ ಹಣದ ಪ್ರಭಾವದಿಂದ ಒತ್ತಡ ಹೇರಿ ಮಾಡಿಸಿಕೊಂಡಿದ್ದ ಮೂಟೆಗಟ್ಟಲೇ ಫಾರ್ಮ್​ ನಂಬರ್ 6 ಹಾಗೂ ಅಲ್ಲಿನ ಇಬ್ಬರು ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿಯಲ್ಲಿ ಇರಿಸಿದ್ದ ದಾಖಲೆಗಳನ್ನು ಬಿಜೆಪಿ ಬಹಿರಂಗಪಡಿಸಿತ್ತು.

ಆಗ ಅಂದಿನ ಪಾಲಿಕೆಯ ಆಯುಕ್ತರಾಗಿದ್ದ ಮಂಜುನಾಥ್ ಪ್ರಸಾದ್ ಅವರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಇಬ್ಬರು ಸಹಾಯಕ ಕಂದಾಯ ಅಧಿಕಾರಿಗಳು, 7 ಮಂದಿ ಕಂದಾಯ ಪರಿವೀಕ್ಷಕರು ಮತ್ತು 7 ಮಂದಿ ಕಂದಾಯ ವಸೂಲಿಗಾರರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದರು. ಅಲ್ಲದೇ 12 ಮಂದಿ ಡೇಟಾ ಎಂಟ್ರಿ ಆಪರೇಟರ್​ಗಳನ್ನು ಕೆಲಸದಿಂದ ತೆಗೆದು ಹಾಕಿದ್ದರು ಎಂದು ವಿವರಿಸಿದರು.

2021ರಲ್ಲಿ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಥಾನದ ಆಕಾಂಕ್ಷಿಗಳು ಸುಮಾರು 4,700 ಕ್ಕೂ ಹೆಚ್ಚು ಹೊರ ಭಾಗದ ಅಲ್ಪಸಂಖ್ಯಾತ ಮತದಾರರನ್ನು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್​ಗಳ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವ ಬಗ್ಗೆ ದಾಖಲೆಗಳ ಸಹಿತ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರುಗಳನ್ನು ನೀಡಲಾಗಿತ್ತು.

ಕಾಂಗ್ರೆಸ್ ಪಕ್ಷದ ಮುಖಂಡರು ಹೊರ ರಾಜ್ಯಗಳ ಬೇರೆ ಬೇರೆ ಭಾಗಗಳಿಂದ ಅಲ್ಪಸಂಖ್ಯಾತ ಸಮುದಾಯದವರನ್ನು ಬೆಂಗಳೂರು ಮಹಾನಗರದ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸುವ ಕಾರ್ಯಗಳನ್ನು ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದಾರೆ.

ಈ ಹಿಂದೆಯೂ ಸುಮಾರು 18,000ಕ್ಕೂ ಹೆಚ್ಚು ಅಕ್ರಮ ಬಾಂಗ್ಲಾ ವಲಸಿಗರನ್ನು ಬೆಂಗಳೂರು ಮಹಾನಗರದ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದ ಬಗ್ಗೆ ದಾಖಲೆಗಳ ಸಹಿತ ದೂರನ್ನು ನೀಡಲಾಗಿತ್ತು. ಅಂದಿನ ಮುಖ್ಯ ಚುನಾವಣಾಧಿಕಾರಿಗಳು ನೀಡಿದ ಆದೇಶದಂತೆ ಸಮಗ್ರವಾದ ತನಿಖೆ ನಡೆಸಿ ಆ ಎಲ್ಲಾ ಬಾಂಗ್ಲಾ ನುಸುಳುಕೋರರ ಹೆಸರುಗಳನ್ನು 2016ರಲ್ಲಿ ಮತದಾರರ ಪಟ್ಟಿಯಿಂದ ತೆಗೆಯಲಾಗಿತ್ತು‌ ಎಂದು ತಿಳಿಸಿದ್ದಾರೆ.

ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಡಾಟಾ ಎಂಟ್ರಿ ಆಪರೇಟರ್​ ಒಬ್ಬರ ನೆರವಿನಿಂದ ನೂರಾರು ಮಂದಿ ಬೆಂಗಳೂರಿಗೆ ಸಂಬಂಧಿಸದ ಜನರನ್ನು ಜಯನಗರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವ ದಾಖಲೆಗಳನ್ನು ದಕ್ಷಿಣ ವಲಯದ ಜಂಟಿ ಆಯುಕ್ತರಿಗೆ ನೀಡಲಾಗಿತ್ತು. ಮತ್ತು ಇದೇ ಕಾರಣದಿಂದ ಆ ಡಾಟಾ ಎಂಟ್ರಿ ಆಪರೇಟರ್ ಅನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು ಎಂದು ಆರೋಪಿಸಿದ್ದಾರೆ.

ದನ್ನೂ ಓದಿ:ಬೊಮ್ಮನಹಳ್ಳಿ ಮತಕ್ಷೇತ್ರದ 7500 ಮತದಾರರು ಬೆಂಗಳೂರು ದಕ್ಷಿಣ ವ್ಯಾಪ್ತಿಗೆ ಸೇರ್ಪಡೆ: ಶಾಸಕ ಸತೀಶ್ ರೆಡ್ಡಿ ಆಕ್ರೋಶ

Last Updated : Nov 19, 2022, 3:15 PM IST

ABOUT THE AUTHOR

...view details