ಬೆಂಗಳೂರು: ಕುರುಬ ಸಮುದಾಯ ಯೂರೋಪ್ ರಾಷ್ಟ್ರಗಳಲ್ಲಿ ಅತ್ಯಂತ ಪ್ರಬಲ ಹಾಗೂ ಜನಪ್ರಿಯವಾಗಿ ಬೆಳೆದಿದೆ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯುರೋಪ್ ಖಂಡದಲ್ಲಿ ಮನ್ನಣೆಗೆ ಪಾತ್ರವಾದ ಸಮುದಾಯ ಇದಾಗಿದೆ. ಲಂಡನ್ ಪಾರ್ಲಿಮೆಂಟ್ನಲ್ಲಿ ಅಧ್ಯಕ್ಷರು ಕುರಿಯ ಉಣ್ಣೆಯ ಮೇಲೆ ಕುಳಿತುಕೊಳ್ಳುತ್ತಾರೆ. ಇನ್ನು ಬುಡಾಪೆಸ್ಟ್ ಅಧ್ಯಕ್ಷರ ಪೂರ್ವ ಆಸನದ ಮೇಲ್ಭಾಗ ಒಬ್ಬ ಕುರುಬ ಕುರಿ ಹಿಡಿದು ನಿಂತ ಚಿತ್ರವಿದೆ. ಜಾಗತಿಕ ಮಟ್ಟದಲ್ಲಿ ಕುರುಬ ಸಮುದಾಯಕ್ಕೆ ಇರುವ ಮನ್ನಣೆಗೆ ಇದು ಉದಾಹರಣೆ. ಈ ಸಮುದಾಯ ದೇಶದಲ್ಲಿ ಕೂಡಾ ಅತ್ಯಂತ ವ್ಯಾಪಕವಾಗಿ ಪಸರಿಸಿದೆ ಎಂದರು.
ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಕೂಡಾ ಕುರುಬ ಸಮುದಾಯದವರು ಅಪಾರ ಶಕ್ತಿಶಾಲಿ ಸಮೂಹವಾಗಿ ರೂಪುಗೊಂಡಿದ್ದು, ಸಂಘಟನೆಯೂ ಬಲಗೊಂಡಿದೆ. ತೆಲಂಗಾಣದಲ್ಲಿ ಸಂಘದ ಅಧ್ಯಕ್ಷರಾಗಿರುವ ಯಗ್ಗಿ ಮಲ್ಲೇಶುಲು ಅಲ್ಲಿನ ವಿಧಾನ ಪರಿಷತ್ ಸದಸ್ಯರು ಕೂಡಾ ಆಗಿದ್ದು, ಇಂದು ನಮ್ಮೊಂದಿಗೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದಾರೆ. ಸಮುದಾಯದ ಬಲವೃದ್ಧಿಗೆ ಉತ್ತಮ ಕೊಡುಗೆ ನೀಡಿದ್ದಾರೆ.
ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳಾದ ಚಂದ್ರಶೇಖರ್ ರಾವ್ ನಮ್ಮನ್ನ ಆಹ್ವಾನಿಸಿ ತುಂಬಾ ಉತ್ತಮ ಕೆಲಸವನ್ನು ಮಾಡುತ್ತಿದ್ದೀರಾ. ಈ ರಾಜ್ಯದಲ್ಲಿ ಸಾಕಷ್ಟು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸರ್ಕಾರದ ಕಡೆಯಿಂದ ಅಗತ್ಯವಿರುವ ಸಹಕಾರ ನೀಡುವುದಾಗಿ ಭರವಸೆ ಕೊಟ್ಟರು. ನೀಡಿದ ಭರವಸೆಯಂತೆ ಸಮುದಾಯಕ್ಕೆ ಒಂದು ವಿಧಾನ ಪರಿಷತ್ ಸದಸ್ಯ ಸ್ಥಾನ, 5 ಕೋಟಿ ರೂಪಾಯಿ ವಿಶೇಷ ಅನುದಾನ, ಐದು ಎಕರೆ ಭೂಮಿಯನ್ನು ಕೊಡುವುದಾಗಿ ಭರವಸೆ ಕೊಟ್ಟಿದ್ದು, ಅದನ್ನು ಈಡೇರಿಸಿದ್ದಾರೆ ಎಂದು ತಿಳಿಸಿದರು.
ಹೈದರಾಬಾದ್ನ ಅತ್ಯಂತ ಪ್ರಮುಖ ಸ್ಥಳದಲ್ಲಿ ಐದು ಎಕರೆ ಭೂಮಿಯನ್ನು ಸಮುದಾಯದ ಬಳಕೆಗೆ ನೀಡಿದ್ದಾರೆ. ಇದೀಗ ಆಂಧ್ರದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರನ್ನು ಸಂಪರ್ಕಿಸಿದ್ದು, ಸಮುದಾಯದ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ಅದಕ್ಕೆ ಅಗತ್ಯ ಸಹಕಾರ ನೀಡುವ ಭರವಸೆ ಜಗನ್ ಮೋಹನ್ ರೆಡ್ಡಿ ಅವರಿಂದ ಲಭಿಸಿದೆ ಎಂದರು. ತಿರುಪತಿಯಲ್ಲಿಯೂ ಕೂಡಾ ನಮ್ಮ ಸಮುದಾಯ ಭವನ ನಿರ್ಮಿಸಲು ಜಾಗ ನೀಡುವ ಭರವಸೆ ಅಲ್ಲಿನ ಸರ್ಕಾರ ನೀಡಿದೆ ಎಂದು ಉಭಯ ತೆಲುಗು ರಾಜ್ಯಗಳ ಕೊಡುಗೆಯನ್ನು ಸ್ಮರಿಸಿದರು.