ಬೆಂಗಳೂರು:ಕುಂದಾಪುರ ಕನ್ನಡ ಭಾಷೆ ಮಾತನಾಡುವವರು ರಾಜ್ಯ ಮಾತ್ರವಲ್ಲ ಪ್ರಪಂಚದ ಮೂಲೆ ಮೂಲೆಯಲ್ಲೂ ನೆಲೆಸಿದ್ದಾರೆ. ಕುಂದಗನ್ನಡ ಎಂದು ಪ್ರಖ್ಯಾತಿಯ ಗ್ರಾಮೀಣ ಸೊಗಡಿನ ಭಾಷೆಗೆ ತನ್ನದೇ ಅಸ್ತಿತ್ವ ಕೊಡಬೇಕು. ಈ ಭಾಷೆ ಕೇವಲ ಹಾಸ್ಯಕ್ಕೆ ಸೀಮಿತವಾಗದೇ ಇದು ಕುಂದಾಪುರದ ಜನರ ಬದುಕಿನ ಭಾಷೆಯಾಗಿದೆ ಎನ್ನುವುದನ್ನು ತಿಳಿಸುವುದಕ್ಕಾಗಿಯೇ ವಿಶ್ವಕುಂದಾಪ್ರಕನ್ನಡ ದಿನಾಚರಣೆ ನಗರದ ಅತ್ತಿಗುಪ್ಪೆಯ ಬಂಟರ ಸಂಘದಲ್ಲಿ ನಡೆಯಿತು.
ಇಂದು ಮೊದಲಿಗೆ ಕುಂದಾಪುರದ ರಥವನ್ನು ಶಾಸಕ ಗುರುರಾಜ್ ಗಂಟಿಹೊಳೆ, ಕಿರಣ್ ಕೊಡ್ಗಿ, ಕಂಬಳದ ಧುರೀಣ ಶಾಂತರಾಮ್ ಶೆಟ್ಟಿ ಬಾರ್ಕೂರ್ ಎಳೆದು ಸಂಸ್ಕೃತಿಯನ್ನು ಮೆರೆದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಾಂಪ್ರದಾಯಿಕವಾಗಿ ಕಂಬಕ್ಕೆ ಕುಂದಾಪುರ ದಿನದ ಲೋಗೋ ಏರಿಸಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು ಭಾಗವಹಿಸಿದ್ದರು. ಉದ್ಘಾಟನೆ ಬಳಿಕ ಯಕ್ಷಗಾನ, ಹಾಡು, ನಾಟಕಗಳು ಸೇರಿದ್ದ ಜನರ ಮನಸೆಳೆದವು.
ವಿಶ್ವಕುಂದಾಪ್ರಕನ್ನಡ ಹಬ್ಬ:ಚೆಂದದ ಪ್ರಾದೇಶಿಕ ಕನ್ನಡ ಭಾಷೆಯನ್ನು ಅತಿಯಾಗಿ ಪ್ರೀತಿಸುವ ಕುಂದಾಪುರದ ಮನಸ್ಸುಗಳು ಬೆಂಗಳೂರಿನಲ್ಲಿ ವಿಶ್ವಕುಂದಾಪ್ರಕನ್ನಡ ಹಬ್ಬ ನಡೆಸುತ್ತಿವೆ. ಈ ಬಾರಿ ವಿಶ್ವಕುಂದಾಪ್ರಕನ್ನಡ ದಿನದ ಅಂಗವಾಗಿ ಗ್ರಾಮೀಣ ಮಣ್ಣಿನ ಸೊಬಗು, ಸಂಸ್ಕೃತಿಯನ್ನು ಬಿಂಬಿಸುವ ವಿಶಿಷ್ಟವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳೆದ 5 ವರ್ಷಗಳಿಂದ ಆಷಾಢ ಅಮಾವಾಸ್ಯೆ ದಿನವನ್ನು ವಿಶ್ವ ಕುಂದಾಪ್ರಕನ್ನಡ ದಿನ ಎಂದು ಆಚರಣೆ ಮಾಡಲಾಗುತ್ತದೆ ಎಂದು ವಿಶ್ವ ಕುಂದಾಪ್ರಕನ್ನಡ ಪ್ರತಿಷ್ಠಾನದ ಅಜಿತ್ ಶೆಟ್ಟಿ ಉಳ್ತೂರು ಸಮಾರಂಭದಲ್ಲಿ ತಿಳಿಸಿದರು.
ನಿರಂತರ 12 ಗಂಟೆಗಳ ಕಾಲ ನೆಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಕುಂದಾಪುರ ಮೂಲದ ಸ್ಟಾರ್ ನಟ ನಿರ್ದೇಶಕರು ಸಹ ಸಮಾರಂಭದಲ್ಲಿ ಭಾಗಿಯಾಗಿದ್ದರು. ಕುಂದಗನ್ನಡದ ಕಲರವ, ಬದುಕಿನ ಸೊಗಡು ಅನಾವರಣವಾಗಿದೆ. ಊರಗೌರವ, ಹಾಡು ಹಾಸ್ಯ, ನಗು-ನೃತ್ಯ, ಯಕ್ಷಗಾನ, ನುಡಿ ಚಾವುಡಿ, ಖಾದ್ಯ ವೈವಿಧ್ಯ, ಮರೆತ ಆಟೋಟಗಳ ಮೆರವಣಿಗೆ ಸೇರಿದಂತೆ ಇತರ ಕಾರ್ಯಕ್ರಮ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಬದುಕಿನ ಬಂಡಿ ಸಾಗಿಸಲು ಬಂದವರು: ಸುಮಾರು ಮೂರು ದಶಕಗಳ ಹಿಂದೆ ಬದುಕಿನ ಬಂಡಿ ಸಾಗಿಸಲು ಬೆಂಗಳೂರಿಗೆ ಬಂದವರು, ಇಂದು ನಗರಾದ್ಯಂತ ಬೃಹತ್ ಹೋಟೆಲ್ ಉದ್ಯಮ, ಶಿಕ್ಷಣ, ಸಾಹಿತ್ಯ, ಕಲೆ, ಸಿನಿಮಾ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೇವೆಗೈಯುತ್ತ, ಊರಿನ ಭಾಷೆಯನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವವರಾಗಿ ಬೆಳೆದಿದ್ದಾರೆ ಎಂದು ಹೇಳಿದರು.