ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಾರಕ್ಕೊಮ್ಮೆ ವಾತಾವರಣ ಬದಲಾಗುತ್ತಿರುತ್ತೆ. ಒಂದು ವಾರ ಬಿಸಿಲ ಝಳ ಇದ್ದರೆ, ಮತ್ತೊಂದು ವಾರ ಹೇಳದೇ ಕೇಳದೇ ಬರುವ ದಿಢೀರ್ ಮಳೆ.. ಹೀಗೆ ವಾತಾವರಣ ವೈಪರೀತ್ಯ ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.
ಕಳೆದೊಂದು ವಾರದಿಂದ ಅಸನಿ ಪ್ರಭಾವದಿಂದ ಬಿಡುವು ಕೊಡದಂತೆ ಅಬ್ಬರಿಸಿದ ಮಳೆರಾಯ ಕಳೆದ ಮೂರು ದಿನದಿಂದ ತಣ್ಣಗೆ ಆಗಿದ್ದು, ಮತ್ತೆ ಬಿಸಿಲಿನ ದಗೆ ಇರುತ್ತದೆ. ಆದರೆ, ಮಳೆ ನಿಂತು ಹೋದ ಮೇಲೆ ಅನಾರೋಗ್ಯ ಸಮಸ್ಯೆಗಳು ಶುರುವಾಗಿವೆ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ಸಣ್ಣ ಶೀತದಿಂದ ಶುರುವಾಗಿ ವೈರಲ್ ಫೀವರ್ ಕಂಡು ಬರುತ್ತಿದೆ. ಇದರ ಪರಿಣಾಮ ಸಣ್ಣ-ಸಣ್ಣ ಕ್ಲಿನಿಕ್, ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ವೈರಲ್ ಫೀವರ್ ಹೆಚ್ಚಳ ತಜ್ಞರು ಹೇಳುವುದೇನು?:ಸಾಮಾನ್ಯವಾಗಿ ಜೂನ್-ಜುಲೈ ತಿಂಗಳ ಮಳೆಗಾಲದಲ್ಲಿ ಜನರಲ್ಲಿ ಕೆಮ್ಮು- ನೆಗಡಿ ಜ್ವರ, ಅಲರ್ಜಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದರೆ, ಕಳೆದ ಒಂದು ತಿಂಗಳಿನಿಂದ ಮಳೆಯಾಗಿದ್ದರಿಂದ ವೈರಲ್ ಫೀವರ್ ಜಾಸ್ತಿ ಆಗಿದೆ. ಈ ರೀತಿ ಬರುವ ಫೀವರ್ 3-4 ದಿನಗಳು ಇರಲಿದ್ದು, ರೋಗ ಲಕ್ಷಣಗಳು ಏನು ಕಾಣಿಸುತ್ತೋ ಅದಕ್ಕೆ ಚಿಕಿತ್ಸೆ ನೀಡಿ ವಾಸಿ ಮಾಡಲಾಗುತ್ತೆ ಎಂದು ಮಣಿಪಾಲ್ ಆಸ್ಪತ್ರೆಯ ಮಕ್ಕಳ ವಿಭಾಗದ ತಜ್ಞ ಡಾ.ಶರೀಲ್ ಹೆಗ್ಡೆ ಹೇಳಿದರು.
ಸದ್ಯ ನಗರದಲ್ಲಿ ಇತ್ತೀಚೆಗೆ ಶಾಲೆಗಳು ಶುರುವಾದ ಹಿನ್ನೆಲೆ ಮಕ್ಕಳಲ್ಲಿ ವೈರಲ್ ಫೀವರ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಮಕ್ಕಳು ಸೂಕ್ಷ್ಮವಾಗಿ ಇರುವುದರಿಂದ ಮಳೆಯಿಂದ ಥಂಡಿ ವಾತಾವರಣಕ್ಕೆ ಶೀತ ಶುರುವಾಗಿ ಜ್ವರ ಕಾಣಿಸಿಕೊಳ್ಳುತ್ತೆ. ಇದು ಶಾಲೆಯಲ್ಲಿ ಇರುವಾಗ ಅಕ್ಕ-ಪಕ್ಕದಲ್ಲಿ ಕೂರುವಾಗ ಒಬ್ಬರಿಂದ ಒಬ್ಬರಿಗೆ ಜ್ವರ ಹರಡುತ್ತಿದೆ ಎಂದು ಮಾಹಿತಿ ನೀಡಿದರು.
ವಾಸಿಯಾದರೂ ಮತ್ತೆ ಕಾಡುವ ಜ್ವರ:ಒಮ್ಮೆ ವಾಸಿಯಾಗಿರುವ ಜ್ವರ ಮತ್ತೆ ಕಾಡುತ್ತದೆ. ಒಮ್ಮೆ ವಾತಾವರಣ ಶೀತದಿಂದ ಕೂಡಿದ್ದರೆ, ಮತ್ತೊಮ್ಮೆ ಬಿಸಿಲ ದಗೆಯಿಂದಾಗಿ ಏರುಪೇರು ಆಗುತ್ತದೆ. ಆದರೆ, ಹೀಗೆ ಪದೇ ಪದೇ ಕಾಡುವ ಅನಾರೋಗ್ಯಕ್ಕೆ ಗಾಬರಿ ಪಡುವ ಅಗತ್ಯವಿಲ್ಲ. ಈ ವೈರಲ್ ಫೀವರ್ ಬಂದಾಗ ಚಿಕಿತ್ಸೆ ನೀಡಿದರೆ ವಾಸಿಯಾಗುತ್ತೆ. ಆಗ ಇಂತಹ ವೈರಲ್ ಫೀವರ್ ಹೆಚ್ಚಾದಾಗ ಪೋಷಕರು ಹೆಚ್ಚು ಜಾಗೃತರಾಗಿ ಇರಬೇಕು ಎಂದು ಅವರು ಸಲಹೆ ನೀಡಿದರು.
ಮುಂಜಾಗ್ರತೆ ವಹಿಸಿ
- ಜ್ವರದ ಲಕ್ಷಣಗಳು ಇದ್ದರೆ ಅಂತಹವರಿಂದ ದೂರ ಇರಿ.
- ಕೆಮ್ಮು ನೆಗಡಿ ಇದ್ದಾಗ ಅವರ ಸಂಪರ್ಕ ಮಾಡುವುದರಿಂದ ಸುಲಭವಾಗಿ ಹರಡಲಿದೆ.
- ಹ್ಯಾಂಡ್ ಶೇಕ್ ಮಾಡೋದು, ಪಕ್ಕದಲ್ಲೇ ಕೂರುವುದು ಮಾಡಬಾರದು.
- ಮಕ್ಕಳಿಗೆ ಕೆಮ್ಮು ನೆಗಡಿ ಲಕ್ಷಣಗಳು ಇದ್ದಾಗ ಶಾಲೆಗೆ ಕಳಿಸದೇ ಇರುವುದು ಒಳಿತು.
- ಇದರಿಂದ ಇತರೆ ಮಕ್ಕಳಿಗೆ ಜ್ವರ ಹರಡುವುದನ್ನು ತಪ್ಪಿಸಬಹುದು.
- ಪೌಷ್ಟಿಕ ಆಹಾರ ಸೇವಿಸುವುದು.
- ಮಳೆ ಬಂದಾಗ ಬೆಚ್ಚಗಿನ ಉಡುಪು ಧರಿಸುವುದು.
- ಹೊರಗಿನ ಎಣ್ಣೆಯುಕ್ತ ಪದಾರ್ಥಕ್ಕೆ ಬ್ರೇಕ್ ಹಾಕುವುದು ಒಳಿತು.
ಇದನ್ನೂ ಓದಿ:ಹವಾಮಾನ ವರದಿ: ರಾಜ್ಯದಲ್ಲಿ ಮತ್ತೆ ಅಬ್ಬರಿಸಲಿದೆ ಮಳೆ