ಬೆಂಗಳೂರು: ರಾಜಧಾನಿ ಬೆಂಗಳೂರು ನಗರದಲ್ಲಿ ಘನ ತ್ಯಾಜ್ಯ ವಿಲೇವಾರಿಯಲ್ಲಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ವಿಧಿಸುತ್ತಿರುವ ದಂಡದ ಪ್ರಮಾಣ ತೀರಾ ಕಡಿಮೆಯಿದೆ. ಇದರ ಪ್ರಮಾಣ ಹೆಚ್ಚಳ ಮಾಡುವುದರ ಜತೆಗೆ, ಐಪಿಸಿಯ ಸೆಕ್ಷನ್‌ಗಳ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಮೂಲಕ ನಿಯಮ ಉಲ್ಲಂಘನೆ ಮಾಡುವ ಕುರಿತು ಪರಿಶೀಲನೆ ನಡೆಸಬೇಕು ಎಂದು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನಗರದಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ 11 ವಿವಿಧ ಸಾರ್ವಜನಿಕ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿ ವಿಚಾರಣೆಯನ್ನು ಅಕ್ಟೋಬರ್ 11ಕ್ಕೆ ಮುಂದೂಡಿದೆ.
ಘನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಕಳೆದ 2012ರಿಂದ ಹಲವು ನಿರ್ದೇಶನಗಳನ್ನು ನೀಡುತ್ತಿದ್ದರೂ, ನಿಯಮಗಳ ಉಲ್ಲಂಘನೆ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ದಂಡ ಹೆಚ್ಚಳ ಶಿಕ್ಷೆ ಜಾರಿಯಾಗುವಂತೆ ಮಾಡಬೇಕಾಗಿದೆ ಎಂದು ಪೀಠ ತಿಳಿಸಿತು. ಅಲ್ಲದೇ, ದಂಡವನ್ನು ವಿಧಿಸುವ ಮೂಲಕ ಉದ್ದೇಶ ಸಾಧಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ದಂಡವನ್ನು ಹೆಚ್ಚಳ ಮಾಡಬೇಕಾಗಿದೆ ಎಂದು ಪೀಠ ಅಭಿಪ್ರಾಯ ಪಟ್ಟಿತು.
2016ರಿಂದ 2023ರ ವರೆಗಿನ ಅವಧಿಯಲ್ಲಿ ತ್ಯಾಜ್ಯ ಉಲ್ಲಂಘನೆ ಮಾಡಿದ ಒಟ್ಟು 3.84 ಕೋಟಿ ಮಂದಿಗೆ 11.66 ಕೋಟಿ ರು.ಗಳ ದಂಡ ವಿಧಿಸಿದ ಪಾಲಿಕೆ ಅಧಿಕಾರಿಗಳ ಕ್ರಮಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವವವರ ವಿರುದ್ಧ ಬಿಬಿಎಂಪಿ ವಿಧಿಸುತ್ತಿರುವ ದಂಡದ ಪ್ರಮಾಣ ತೀರಾ ಕಡಿಮೆ ಇದೆ. ಇದರಿಂದಾಗಿ ಎಚ್ಚರಿಕೆಯ ನಡುವೆಯೂ ಉಲ್ಲಂಘನೆಗಳು ಮುಂದುವರೆದಿವೆ ಎಂದು ಪೀಠ ಅಭಿಪ್ರಾಯ ಪಟ್ಟಿತು.