ಬೆಂಗಳೂರು: ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಸಂಚಾರಿ ವಿಜಯ್ ಅವರ ಸಹೋದರ ಸಿದ್ಧೇಶ್ ಕುಮಾರ್ ಬೈಕ್ ಸವಾರನ ವಿರುದ್ಧ ಜಯನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ನೇಹಿತನ ಮನೆಗೆ ಹೋಗಿ ನಿನ್ನೆ ರಾತ್ರಿ 11 ಗಂಟೆ ವೇಳೆಗೆ ಜಯನಗರದ 7ನೇ ಹಂತ ಬಳಿ ಬರುವಾಗ ಬೈಕ್ನಲ್ಲಿ ಸ್ಕಿಡ್ ಆಗಿ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ನವೀನ್ ವಿರುದ್ಧ ವಿಜಯ್ ಸಹೋದರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ನಿನ್ನೆ ರಾತ್ರಿ ಅಪಘಾತವಾಗಿರುವ ಬಗ್ಗೆ ಮಾಹಿತಿ ಬಂದಿತ್ತು. ನಾವು ಸ್ಥಳಕ್ಕೆ ಹೋಗುವಷ್ಟರಲ್ಲಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಗಾಯಾಳುಗಳ ಆರೋಗ್ಯ ಸ್ಥಿತಿಯನ್ನು ಖಚಿತ ಪಡಿಸಿಕೊಂಡಿದ್ದೆವು. ಇದೀಗ ವಿಜಯ್ ಸಹೋದರ ಸಿದ್ದೇಶ್ ಕುಮಾರ್ ಎಂಬುವರು ನವೀನ್ ವಿರುದ್ಧ ದೂರು ನೀಡಿದ್ದಾರೆ. ದೂರು ಸ್ವೀಕಾರವಾಗಿದ್ದು, ಸ್ಥಳಕ್ಕೆ ಹೋಗಿ ಮಹಜರು ಮಾಡಿ ಕಾನೂನು ಪ್ರಕ್ರಿಯೆ ಮುಗಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಯನಗರ ಸಂಚಾರಿ ಠಾಣೆಯ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.