ಬೆಂಗಳೂರು: ವಿಧಾನಸೌಧ ಬಳಿ ಪಿಡಬ್ಲ್ಯೂಡಿ ಎಂಜಿನಿಯರ್ ಜಗದೀಶ್ ಎಂಬವರಿಂದ 10 ಲಕ್ಷ ರೂಪಾಯಿ ಹಣ ಸಿಕ್ಕಿರುವ ಪ್ರಕರಣ ನಿನ್ನೆ ನಡೆದಿತ್ತು. ಈ ಕುರಿತು ಟ್ವೀಟ್ ಮಾಡಿರುವ ಬಂಧಿತ ಎಂಜಿನಿಯರ್ ಜಗದೀಶ್ ಪರ ವಕೀಲ ರಾಜು ಗಡೇಕರ್, 'ಡಿಸಿಪಿ ಆಣತಿಯಂತೆ ವಕೀಲರೊಂದಿಗೆ ಠಾಣೆಗೆ ಹಾಜರಾದ ವ್ಯಕ್ತಿಯನ್ನು ಅಕ್ರಮವಾಗಿ ಕೂಡಿ ಹಾಕಿದ್ದು, ನಂತರ ಭೇಟಿ ಮಾಡಲು ಅವಕಾಶ ಕಲ್ಪಿಸಿಲ್ಲ' ಎಂದು ಆರೋಪಿಸಿದ್ದಾರೆ.
ಎಂಜಿನಿಯರ್ ಜಗದೀಶ್ ಬ್ಯಾಗ್ನಲ್ಲಿ ಹಣ ಪತ್ತೆ: ಮಂಡ್ಯದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ್ ಬುಧವಾರ ಸಂಜೆ 4:15ರ ಸುಮಾರಿಗೆ ವಿಧಾನಸೌಧದ ಒಳ ಪ್ರವೇಶಿಸಲು ಪಶ್ಚಿಮ ದ್ವಾರದ ಬಳಿ ಬಂದಿದ್ದರು. ಭದ್ರತಾ ಸಿಬ್ಬಂದಿ ಬ್ಯಾಗ್ ತಪಾಸಣೆ ನಡೆಸಿದಾಗ 10 ಲಕ್ಷ ರೂ ಹಣ ಪತ್ತೆಯಾಗಿದೆ. ಜಗದೀಶ್ ಸೂಕ್ತ ಮಾಹಿತಿ ನೀಡದ ಹಿನ್ನೆಲೆ ಮತ್ತು ಸೂಕ್ತ ದಾಖಲಾತಿ ಇಲ್ಲದ್ದರಿಂದ ಭದ್ರತಾ ಸಿಬ್ಬಂದಿ ವಿಧಾನಸೌಧ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹಣದ ಬ್ಯಾಗ್ ಜೊತೆ ಜಗದೀಶ್ ಅವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ನಿನ್ನೆ ಪೊಲೀಸರು ಮಾಹಿತಿ ನೀಡಿದ್ದರು.
'ಭದ್ರತಾ ಸಿಬ್ಬಂದಿಯ ಮಾಹಿತಿ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ವಿಚಾರಣೆಯಲ್ಲಿ ಜಗದೀಶ್ ಅವರು ಮಂಡ್ಯಕ್ಕೆ ತೆಗೆದುಕೊಂಡು ಹೋಗಲು ಹಣ ತಂದಿದ್ದು, ಸೂಕ್ತ ದಾಖಲಾತಿ ನೀಡಲು ಸಮಯಾವಕಾಶ ಕೊಡುವಂತೆ ಕೇಳಿಕೊಂಡಿದ್ದರು. ಅದರಂತೆ ಜಗದೀಶ್‌ಗೆ ವಕೀಲರ ಜೊತೆ ಠಾಣೆಗೆ ಬಂದು ಸೂಕ್ತ ದಾಖಲೆಯನ್ನು ಒದಗಿಸುವಂತೆ ಸೂಚಿಸಲಾಗಿತ್ತು' ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದ್ದರು. 'ಹಣವನ್ನು ಕೋರ್ಟ್ ವಶಕ್ಕೆ ನೀಡಿದ್ದೇವೆ. ಸೂಕ್ತ ದಾಖಲಾತಿ ತಂದು ಕೋರ್ಟ್ನಲ್ಲೇ ಹಣ ಪಡೆದುಕೊಳ್ಳುವಂತೆ ತಿಳಿಸಿದ್ದೇವೆ. ನೋಟಿಸ್ ನೀಡಿ ಇಂದು ಕೂಡ ವಿಚಾರಣೆಗೆ ಕರೆದಿದ್ದೇವೆ. ವಿಚಾರಣೆ ಬಳಿಕವಷ್ಟೇ ಇನ್ನುಳಿದ ಮಾಹಿತಿ ತಿಳಿದು ಬರಲಿದೆ' ಎಂದು ಅವರು ತಿಳಿಸಿದ್ದರು.