ಬೆಂಗಳೂರು: ಭಾರತೀಯರಲ್ಲಿ ಆವಿಷ್ಕಾರ, ಸಂಶೋಧನೆ ಮತ್ತು ಉದ್ಯಮಶೀಲತೆಯ ಶಕ್ತಿ ದೊಡ್ಡ ಪ್ರಮಾಣದಲ್ಲಿದೆ. ಭಾರತದ ಹೆಚ್ಚುತ್ತಿರುವ ಸಾಧನೆಗಳ ಬಗ್ಗೆ ನಾವು ಹೆಮ್ಮೆ ಪಡಬೇಕು ಎಂದು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಗೋಕುಲ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕ ಡಾ.ಎಂ.ಎಸ್ ರಾಮಯ್ಯ ಅವರ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಸಭೆ ಉದ್ದೇಶಿಸಿ ಮಾತನಾಡಿದರು.
ಸಮಾಜದ ಪರಿವರ್ತನೆಯಲ್ಲಿ ಶಿಕ್ಷಣದ ಪಾತ್ರ ಮಹತ್ವವಾದುದು. ಪ್ರಾಚೀನ ಕಾಲದಿಂದಲೂ ಭಾರತವು ನಳಂದ, ತಕ್ಷಶಿಲಾ, ವಲ್ಲಭಿ ಮತ್ತು ವಿಕ್ರಮಶಿಲೆಯಂತಹ ಶ್ರೇಷ್ಠ ಶಿಕ್ಷಣ ಕೇಂದ್ರಗಳಿಗೆ ನೆಲೆಯಾಗಿತ್ತು. ಭಾರತದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಸೇರ್ಪಡೆ ಮತ್ತು ಶ್ರೇಷ್ಠತೆಯನ್ನು ತರುವಲ್ಲಿ ಹೊಸ ಶಿಕ್ಷಣ ನೀತಿಯ ಪಾತ್ರ ಮುಖ್ಯವಾಗಿದೆ. ನೂತನ ರಾಷ್ಟ್ರೀಯ ಶಿಕ್ಷಣ-2020 ನೀತಿಯನ್ನು ಗೇಮ್ ಚೇಂಜರ್ ಎಂದು ವಿವರಿಸಲಾಗಿದೆ ಎಂದು ಉಪರಾಷ್ಟ್ರಪತಿ ಹೇಳಿದರು.
ರಾಷ್ಟ್ರೀಯ ಶಿಕ್ಷಣ ನೀತಿಯ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಕ್ರಾಂತಿಕಾರಕಗೊಳಿಸುತ್ತದೆ. ಇದು ನಮ್ಮನ್ನು ಪದವಿ ಆಧಾರಿತ ಸಂಸ್ಕೃತಿಯಿಂದ ದೂರವಿಡುತ್ತದೆ. ಜೊತೆಗೆ ಉತ್ಪಾದಕ ಹಾದಿಯಲ್ಲಿ ನಮ್ಮನ್ನು ಕರೆದೊಯ್ಯುತ್ತದೆ ಎಂದರು. ಇನ್ನು ವಿದ್ಯಾರ್ಥಿಗಳು ಹೆಚ್ಚು ಒತ್ತಡ ಮತ್ತು ಉದ್ವೇಗಕ್ಕೆ ಒಳಗಾಗಬೇಡಿ. ಸ್ಪರ್ಧಾತ್ಮಕ ಸನ್ನಿವೇಶಗಳಿಗೆ ಸಿಲುಕಿಕೊಳ್ಳಬೇಡಿ. ಪ್ರಯತ್ನಿಸುವ ವಿಚಾರದಲ್ಲಿ ಹಿಂಜರಿಯಬೇಡಿ. ಏಕೆಂದರೆ ತಪ್ಪು ಇರಬಹುದು. ಬೀಳದೆ ದೊಡ್ಡದನ್ನು ಸಾಧಿಸಲು ಆಗಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಹೇಳಿದರು.
ಜಾಗತಿಕ ಮಟ್ಟದಲ್ಲಿ ಭಾರತದ ಅಪ್ರತಿಮ ಸಾಧನೆ ಎತ್ತಿ ಹಿಡಿದ ಉಪರಾಷ್ಟ್ರಪತಿಗಳು, ಜಗತ್ತು ಭಾರತವನ್ನು ಗೌರವಿಸುತ್ತದೆ ಮತ್ತು ಭಾರತದ ಧ್ವನಿಯನ್ನು ಆಲಿಸುತ್ತದೆ. ಆದರೆ, ಸಂಸತ್ತು ಇಂದು ಸರ್ಕಾರವನ್ನು ಹೊಣೆಗಾರರನ್ನಾಗಿಸಲು ವೇದಿಕೆಯಾಗಿದೆ ಸದನದಲ್ಲಿ ನಡೆಯುವ ಘಟನೆಗಳ ಘಟನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಈ ಪ್ರವೃತ್ತಿಯನ್ನು ತಡೆಗಟ್ಟಲು ಸಾಮೂಹಿಕ ಆಂದೋಲನ ಪ್ರಾರಂಭಿಸಬೇಕು. ನಮ್ಮನ್ನಾಳುವವರ ಮನವೊಲಿಸಲು ಸಾರ್ವಜನಿಕ ಅಭಿಪ್ರಾಯವನ್ನು ಸೃಷ್ಟಿಸಬೇಕು. ಎಲ್ಲರೂ ಅನುಕರಣೆಗೆ ಯೋಗ್ಯವಾದ ನಡವಳಿಕೆಯನ್ನು ಹೊಂದುವಂತೆ ಮಾಡಬೇಕೆಂದು ಹೇಳಿದರು.
ಉಪರಾಷ್ಟ್ರಪತಿಯಾದ ಬಳಿಕ ಕರ್ನಾಟಕಕ್ಕೆ ಮೊದಲ ಭೇಟಿ : ಭಾರತದ ಉಪರಾಷ್ಟ್ರಪತಿಯಾಗಿ ನಿಯೋಜಿತರಾದ ಬಳಿಕ ಕರ್ನಾಟಕ ರಾಜ್ಯಕ್ಕೆ ಧನ್ಕರ್ ಅವರ ಮೊದಲ ಭೇಟಿ ಇದಾಗಿದೆ. ಕರ್ನಾಟಕ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದ ಅವರು ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ಹಲವು ಗಣ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ದೇವಾಲಯ ಭೇಟಿ : ಇದಕ್ಕೂ ಮೊದಲು ಬೆಂಗಳೂರಿನ ದೊಡ್ಡ ಗಣಪತಿ ಮತ್ತು ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಡಾ ಸುದೇಶ್ ಧನಕರ್ ಅವರೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಗಣೇಶ ದೇವಸ್ಥಾನಕ್ಕೆ ಬೆಳಿಗ್ಗೆ ದಂಪತಿ ಸಮೇತರಾಗಿ ಆಗಮಿಸಿದ ಉಪ ರಾಷ್ಟ್ರಪತಿ ಅವರನ್ನು ಡೋಲು, ನಾದಸ್ವರದ ಮೂಲಕ ವಿಶೇಷವಾಗಿ ಸ್ವಾಗತಿಸಲಾಯಿತು. ವಾಯುಪಡೆಯ ವಿಶೇಷ ವಿಮಾನದಲ್ಲಿ ನಿನ್ನೆ ಸಂಜೆ ನಗರದ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಉಪರಾಷ್ಟ್ರಪತಿ ಧನ್ಕರ್ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸ್ವಾಗತಿಸಿದ್ದರು.
ಇದನ್ನೂ ಓದಿ :ಹಾರ್ಮೋನಿಯಂ ನುಡಿಸಿ ಗಮನ ಸೆಳೆದ ಉಪ ರಾಷ್ಟ್ರಪತಿ ಜಗದೀಪ್ ಧನಕರ್!