ಬೆಂಗಳೂರು: ರಾಜ್ಯ ಗೃಹಮಂತ್ರಿ ಆರಗ ಜ್ಞಾನೇಂದ್ರ ಸಂಘದ ಮೂಲದವರಾಗಿದ್ದಾರೆ. ಅವರಿಗೆ ಕೂತರೂ,ನಿಂತರೂ, ಆರ್ಎಸ್ಎಸ್ ಮತ್ತು ಕೇಸರಿ ಕಾಣಿಸುತ್ತದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದರು.
ಕೂತರೂ,ನಿಂತರೂ ಗೃಹ ಸಚಿವರಿಗೆ ಆರ್ಎಸ್ಎಸ್ ಮತ್ತು ಕೇಸರಿ ಕಾಣಿಸುತ್ತದೆ ಎಂದ ವಾಟಾಳ್ ಪೊಲೀಸರು ಕೇಸರಿ ಉಡುಪು ಧರಿಸಿದಕ್ಕೆ ವಿರೋಧ ವ್ಯಕ್ತಪಡಿಸಿ, ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರಾಳ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಈಟಿವಿ ಭಾರತದ ಜೊತೆ ಮಾತನಾಡಿದ ಅವರು, ರಾಜ್ಯದ ಪೊಲೀಸ್ ಇಲಾಖೆ ದೇಶದಲ್ಲಿ ಅತ್ಯಂತ ಜವಾಬ್ದಾರಿಯುತ ಮತ್ತು ಶಕ್ತಿಯುತ ಇಲಾಖೆಯಾಗಿದೆ. ರಾಜ್ಯ ಪೊಲೀಸರು ಒಳ್ಳೆಯ ಹೆಸರನ್ನು ಪಡೆದಿದ್ದಾರೆ ಎಂದರು.
ಮೊದಲ ಬಾರಿಗೆ ಪೊಲೀಸರಿಂದ ಕೇಸರಿ ಬಟ್ಟೆ ಬಳಕೆ: ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ ದಸರಾ ಹಬ್ಬದ ದಿವಸ ಪೊಲೀಸರು ಕೇಸರಿ ಬಟ್ಟೆಯನ್ನು ಧರಿಸಿದ್ದಾರೆ. ಇಲ್ಲಿಯವರೆಗೂ ಯಾವ ಬಾರಿಯು ಕೇಸರಿ ಉಡುಪನ್ನು ಧರಿಸಿರಲಿಲ್ಲ. ಈ ವಿಚಾರವನ್ನು ಲಘುವಾಗಿ ಪರಿಗಣಿಸಬಾರದು. ಇದರ ಹಿನ್ನೆಲೆ ಏನು ಅಂತ ತಿಳಿದುಕೊಳ್ಳಬೇಕು ಮತ್ತು ಉನ್ನತ ಮಟ್ಟದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಪೊಲೀಸರಿಗೆ ಪ್ಯಾಂಟ್ ತಂದಿದ್ದು ನಾನು: ಮೊದಲು ಪೊಲೀಸರಿಗೆ ಚಡ್ಡಿ ಇತ್ತು. ಆದರೆ ಪ್ಯಾಂಟ್ ತಂದಿದ್ದು ನಾನು. ಪೊಲೀಸ್ ಇಲಾಖೆಯನ್ನು ಕಲುಷಿತ ಮಾಡಬಾರದು. ಪೊಲೀಸ್ ಇಲಾಖೆಯ ಮಧ್ಯ ರಾಜಕೀಯ ತರಬಾರದು. ಪೊಲೀಸ್ ಇಲಾಖೆಗೆ ತಮ್ಮದೆ ಆದಂತಹ ಉಡುಪಿದೆ, ಹೀಗಾಗಿ ಕೇಸರಿ ಉಡುಪು ಧರಿಸುವುದನ್ನು ತೀವ್ರವಾಗಿ ಖಂಡಿಸುತ್ತೇನೆಂದು ಹೇಳಿದರು.