ಬೆಂಗಳೂರು :ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಸುವ ಕುರಿತು ಮಾಜಿ ಸಚಿವ ವರ್ತೂರು ಪ್ರಕಾಶ್ ನಿರ್ಧಾರ ಪ್ರಕಟಿಸಿದ್ದಾರೆ. ಬಿಜೆಪಿ ಸೇರ್ಪಡೆ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆ ಮಾತುಕತೆ ನಡೆಸಿ ಈ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
ಬಿಜೆಪಿ ಸೇರ್ಪಡೆ ಬಗ್ಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿರುವುದು.. ಆರ್. ಟಿ ನಗರದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ಖಾಸಗಿ ನಿವಾಸಕ್ಕೆ ಸಚಿವರುಗಳಾದ ಡಾ. ಸುಧಾಕರ್, ಮುನಿರತ್ನ ಜೊತೆಯಲ್ಲಿ ಆಗಮಿಸಿದ ಅವರು, ಸಿಎಂ ಜೊತೆ ರಾಜಕೀಯ ವಿಚಾರಗಳ ಕುರಿತು ಮಹತ್ವದ ಸಮಾಲೋಚನೆ ನಡೆಸಿದರು.
ಈ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವುದು ಹಾಗೂ ಬಿಜೆಪಿ ಸೇರ್ಪಡೆ ಕುರಿತು ಸಮಾಲೋಚನೆ ನಡೆಸಲಾಯಿತು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಸಹಾಯ, ಸಹಕಾರ ಕೊಡಬೇಕು ಎಂದು ಸಿಎಂ ಹೇಳಿದ್ದಾರೆ. ಅದರಂತೆ ವಿಧಾನ ಪರಿಷತ್ ಚುನಾವಣೆಗೆ ಸಂಪೂರ್ಣ ಸಹಕಾರ ನೀಡಲಿದ್ದೇವೆ.
ಇವತ್ತು ನಮ್ಮ ಜಿಲ್ಲಾ, ತಾಲೂಕು ಹಾಗು ಗ್ರಾಮ ಪಂಚಾಯತ್ ಸದಸ್ಯರ ಜೊತೆ ಸಭೆ ನಡೆಸುತ್ತೇನೆ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ.ಕೆ ಸುಧಾಕರ್ ಹಾಗೂ ಕೋಲಾರ ಎಂಪಿ ಮುನಿಸ್ವಾಮಿ ಸಮ್ಮುಖದಲ್ಲಿ ಬೆಂಬಲ ಘೋಷಿಸುತ್ತೇನೆ. ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿ ಮಾಡಿ ಪಕ್ಷ ಸೇರ್ಪಡೆ ಬಗ್ಗೆ ಚರ್ಚಿಸಿ ನಿರ್ಧರಿಸುತ್ತೇನೆ' ಎಂದರು.
2008ರಲ್ಲಿ ಮೊದಲ ಬಾರಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದ ವೇಳೆ ಪಕ್ಷೇತರ ಶಾಸಕರಾಗಿದ್ದ ವರ್ತೂರು ಪ್ರಕಾಶ್ ಬಹುಮತದ ಕೊರತೆ ಎದುರಿಸಿದ್ದ ಬಿಜೆಪಿಗೆ ಬೆಂಬಲ ನೀಡಿ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ನಂತರ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಕಾಂಗ್ರೆಸ್ ಸೇರಿ ಸಿದ್ದರಾಮಯ್ಯ ಆಪ್ತರಾಗಿ ಗುರುತಿಸಿಕೊಂಡಿದ್ದರು. ಇದೀಗ, ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ.
ಓದಿ:ಬೆಂಗಳೂರು ಅಜೆಂಡಾ ಬಗ್ಗೆ ಕಿರಣ್ ಮಜುಂದಾರ್ ನಿವಾಸದಲ್ಲಿ ನಡೆಯುತ್ತಿರುವ ಸಭೆಗೆ ಸಿಎಂ..