ಬೆಂಗಳೂರು: ಕಮಿಷನರ್ ಕಚೇರಿ ವ್ಯಾಪ್ತಿಯಲ್ಲಿರುವ ವನಿತಾ ಸಹಾಯವಾಣಿಗೆ ದಿನಕ್ಕೆ ನೂರಾರು ಕೇಸ್ ಗಳು ಬರುತ್ತಿವೆ. ಅದು ಕೂಡ ನಗರದಲ್ಲಿ ಹಾಗೇ ವಿದೇಶದಿಂದ ವಿಚಿತ್ರ ವಿಚಿತ್ರವಾಗಿ ಗಂಡ, ಹೆಂಡತಿಯ ನಡುವೆ ನಡೆಯುವ ಗಲಾಟೆ ಪ್ರಕರಣ, ಕುಟುಂಬ ಕಲಹ ಪ್ರಕರಣಗಳು ಬರುತ್ತಿವೆ. ಸದ್ಯ ವನಿತಾ ಸಹಾಯವಾಣಿಯವರು ಬಹಳ ತಾಳ್ಮೆಯಿಂದ ಈ ಸಮಸ್ಯೆಗಳನ್ನ ಬಗೆ ಹರಿಸುವ ಕೆಲಸ ಮಾಡುತ್ತಿದ್ದಾರೆ.
ವನಿತಾ ಸಹಾಯವಾಣಿಗೆ ಬರ್ತಿವೆ ವಿಚಿತ್ರವಾದ ಕರೆಗಳು ವಿಚಿತ್ರ ಪ್ರಕರಣಗಳ ಮಾಹಿತಿ...
ಕ್ವಾರಂಟೈನ್ ನೆಪ ಹೇಳಿ ಪತ್ನಿ ದೂರ ಮಾಡಿದ ಪತಿ: ಗಂಡ-ಹೆಂಡತಿ ಮಧ್ಯೆ ಆರು ತಿಂಗಳ ಹಿಂದೆ ಜಗಳವಾಗಿತ್ತು. ಹೀಗಾಗಿ ಹೆಂಡತಿ ಗಂಡನನ್ನ ಬಿಟ್ಟು ತಾಯಿ ಮನೆಗೆ ಕೋಲ್ಕತ್ತಾಕ್ಕೆ ಹೋಗಿದ್ದಳು. ಮತ್ತೆ ಗಂಡನ ಮನೆಗೆ ವಾಪಸ್ ಬಂದು ಜೀವನ ಮಾಡುವುದಾಗಿ ತಿಳಿಸಿದ್ದಾಳೆ. ಆದರೆ ಗಂಡ ಆಕೆಯನ್ನ ಸೇರಿಸದೆ ಇಷ್ಟು ದಿವಸ ಬಿಟ್ಟು ಹೋಗಿದ್ದಿಯಾ, ಇವಾಗ ಬಂದ್ರೆ ನೀನು ಕ್ವಾರಂಟೈನ್ ಆಗಬೇಕು. ಹಾಗೆ ನನಗೆ, ತಂದೆ, ತಾಯಿಗೆ ಕೊರೊನಾ ಬರುವ ಸಾಧ್ಯತೆ ಇದೆ. ಮನೆಯಲ್ಲಿ ವಯಸ್ಸಾದ ತಂದೆ ತಾಯಿ ಇದ್ದಾರೆ ಎಂದು ಮನೆಯ ಒಳಗಡೆ ಸೇರಿಸಿಲ್ಲ. ನೊಂದ ಮಹಿಳೆ ವನಿತಾ ಸಹಾಯವಾಣಿಯವರಿಗೆ ಕರೆ ಮಾಡಿದ್ದಾಳೆ. ಈ ವೇಳೆ ದಂಪತಿಗೆ ಕೌನ್ಸಿಲಿಂಗ್ ಮಾಡಿ ತದ ನಂತರ ಆಕೆಯನ್ನ ಹೊಟೇಲ್ ಕ್ವಾರಂಟೈನ್ ಮಾಡಿದ್ದಾರೆ. ಆದರೆ ಹೆಂಡತಿ ಕ್ವಾರಂಟೈನ್ ಮುಗಿದ ಕಾರಣ ಗಂಡನಿಗೆ ಎಷ್ಟೇ ಕೌನ್ಸಿಲಿಂಗ್ ಮಾಡಿದರು ಆತ ಆಕೆಯ ಜೊತೆ ಜೀವನ ಮಾಡೋಕ್ಕೆ ಸಮ್ಮತಿ ಸೂಚಿಸಿಲ್ಲ. ಸದ್ಯ ವನಿತಾ ಸಹಾಯವಾಣಿಯವರು ಮಹಿಳೆಗೆ ಕಾನೂನು ರೀತಿ ಹೋರಾಟ ನಡೆಸಲು ತಿಳಿಸಿದ್ದಾರೆ.
ಮಗನಿಂದ ತಂದೆ-ತಾಯಿಗೆ ಬುದ್ಧಿ ಹೇಳುವಂತೆ ಕರೆ:ಕುಟುಂಬವೊಂದು ಅಮೇರಿಕದಲ್ಲಿ ಕೆಲಸದ ನಿಮಿತ್ತ ಸುಮಾರು ವರ್ಷಗಳಿಂದ ನೆಲೆಸಿತ್ತು. ಅಮೇರಿಕದಲ್ಲೂ ಕೊರೊನಾ ಇದ್ದಿದ್ದರಿಂದ ಅಲ್ಲಿಯೂ ಕೆಲಸ ಇಲ್ಲದೆ ಪರದಾಡುತ್ತಿದ್ದಾರೆ. ಕುಟುಂಬದ ತಂದೆ-ತಾಯಿ ಬೆಂಗಳೂರಿನಲ್ಲಿ ವಾಸವಿದ್ದರು. ಅಲ್ಲಿನ ಪರಿಸ್ಥಿತಿಯನ್ನ ಎಷ್ಟೇ ಹೇಳಿದರು ಕೇಳದೆ ಹಣ ಕಳಿಸುತ್ತಿಲ್ಲ, ನಾವಿಲ್ಲಿ ಸಾಯುತ್ತಿದ್ದೇವೆ ಎಂದು ತಂದೆ ಅಮೇರಿಕಾದಲ್ಲಿರುವ ಮಗನಿಗೆ ಟಾರ್ಚರ್ ಕೊಡುತ್ತಿದ್ದರಂತೆ. ಹೀಗಾಗಿ ಗೂಗಲ್ ಮೂಲಕ ವನಿತಾ ಸಹಾಯವಾಣಿ ನಂಬರ್ ತೆಗೆದುಕೊಂಡು ನನ್ನ ತಂದೆಗೆ ಬುದ್ಧಿ ಹೇಳಿ ಎಂದಿದ್ದಾನೆ. ವನಿತಾ ಸಹಾಯವಾಣಿಯವರು ಸದ್ಯ ತಂದೆಗೆ ಬುದ್ಧಿ ಹೇಳಿದ ಕಾರಣ ಅರ್ಥೈಸಿಕೊಂಡು ಅವರು ಸುಮ್ಮನಾಗಿದ್ದಾರೆ.
ಕೆಲಸ ನಿಮಿತ್ತ ಹೋದವಳನ್ನ ಕೊರೊನಾ ನೆಪ ಹೇಳಿ ಮನೆಗೆ ಸೇರಿಸಿಲ್ಲ: ಇನ್ನೂ ಮಹಿಳೆಯೊಬ್ಬಳು ಕೋಲ್ಕತ್ತಾಗೆ ಕೆಲಸದ ನಿಮಿತ್ತ ಹೋಗಿದ್ದಳು. ಈ ವೇಳೆ ಅನ್ಲಾಕ್ ಆದ ಮೇಲೆ ಮನೆಗೆ ಬಂದಿದ್ದಾಳೆ. ಅವಳನ್ನ ನಿನಗೆ ಕೊರೋನಾ ಇದೆ, ನೀನು ವಾಪಸ್ ಹೋಗು, ಮನೆಗೆ ಸೇರಿಸಲ್ಲವೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಎಷ್ಟೇ ಕೇಳಿಕೊಂಡರೂ ಕೇಳದೆ ಆಕೆಯನ್ನ ವಾಪಸ್ ಹೋಗುವಂತೆ ತಿಳಿಸಿದ್ದಾರೆ. ಹೀಗಾಗಿ ಆಕೆ ವಾಪಸ್ ಹೋಗಿ ಗೂಗಲ್ ಮೂಲಕ ವನಿತಾ ಸಹಾಯವಾಣಿ ನಂಬರ್ ಪಡೆದುಕೊಂಡು ಕರೆ ಮಾಡಿ ಮನೆಗೆ ಕಳುಹಿಸುವಂತೆ ಮನವಿ ಮಾಡಿದ್ದಾಳೆ. ಸದ್ಯ ಕ್ವಾರಂಟೈನ್ ಗೆ ಒಳಪಟ್ಟಿದ್ದು, ಗುಜರಾತಿ ಅಸೋಸಿಯೇಷನ್ ಅವರ ನೆರವಿನ ಮೂಲಕ ಆಕೆಗೆ ನೆಲೆ ಕೊಡಿಸಿದ್ದಾರೆ ವನಿತಾ ಸಹಾಯವಾಣಿ ಸಿಬ್ಬಂದಿ.
ದುಡ್ಡು ಕಳುಹಿಸುವಂತೆ ಹೆಂಡತಿ ಟಾರ್ಚರ್: ಪೀಣ್ಯ ಬಳಿಯಿರುವ ವ್ಯಕ್ತಿಯೊಬ್ಬ ಕೆಲಸದ ನಿಮಿತ್ತ ಫಾರಿನ್ ಗೆ ತೆರಳಿದ್ದರು. ಲಾಕ್ ಡೌನ್ ಆದ ಹಿನ್ನೆಲೆ ವಾಪಸ್ ಬರಲು ಆಗಿರಲಿಲ್ಲ. ತನ್ನ ಫ್ಯಾಮಿಲಿಯನ್ನ ಇಲ್ಲಿಯೇ ಬಿಟ್ಟು ಹೋಗಿದ್ದ. ಆದರೆ ಮನೆಗೆ ದುಡ್ಡು ಕಳುಹಿಸಿ ಎಂದು ಹೆಂಡತಿ ಟಾರ್ಚರ್ ಮಾಡುತ್ತಿದ್ದರಂತೆ. ವಿದೇಶದಿಂದ ವ್ಯಕ್ತಿ ವನಿತಾ ಸಹಾಯವಣೆ ಕರೆ ಮಾಡಿದ್ದಾರೆ. ಸದ್ಯ ಫೋನ್ ಕಾಲ್ ಮೂಲಕ ಮಹಿಳೆಗೆ ಸಮಾಧಾನ ಮಾಡಿ ವನಿತಾ ಸಹಾಯವಾಣಿ ಸಿಬ್ಬಂದಿ ಬುದ್ಧಿ ಹೇಳಿದ್ದಾರೆ.
ಒಟ್ಟಿನಲ್ಲಿ, ವನಿತಾ ಸಹಾಯವಾಣಿಗೆ ದಿನಕ್ಕೊಂದು ಚಿತ್ರ ವಿಚಿತ್ರ ಕರೆ ಬರುತ್ತಿದ್ದು, ಆದಷ್ಟು ಕೌನ್ಸಿಲಿಂಗ್ ಮುಖಾಂತರ ಬಗೆಹರಿಸಲು ಪ್ರಯತ್ನ ಮಾಡುತ್ತಿದ್ದಾರೆ ವನಿತಾ ಸಹಾಯವಾಣಿಯ ನೌಕರರು.