ಬೆಂಗಳೂರು : ಯೂಟರ್ನ್ ಪಡೆಯುತ್ತಿದ್ದಾಗ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಶಾಲಾ ಮಕ್ಕಳಿದ್ದ ವ್ಯಾನ್ ಪಲ್ಟಿಯಾದ ಘಟನೆ ಬನಶಂಕರಿಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಇಂದು ನಡೆದಿದೆ.
ಬೆಳಗ್ಗೆ ಕಾಮಾಕ್ಯ ಕಡೆಯಿಂದ ಪದ್ಮನಾಭ ನಗರದ ಖಾಸಗಿ ಶಾಲೆಗೆ ತೆರಳುತ್ತಿದ್ದ ವ್ಯಾನ್ ಚಾಲಕ ರಸ್ತೆ ಸಿಗ್ನಲ್ ಫ್ರೀ ಇದ್ದುದರಿಂದ ದಿಢೀರ್ ಯೂಟರ್ನ್ ಪಡೆದಿದ್ದಾರೆ. ಈ ವೇಳೆ ವ್ಯಾನ್ ಚಕ್ರ ರಸ್ತೆ ವಿಭಜಕದ ಮೇಲೆ ಹತ್ತಿ, ಪಲ್ಟಿಯಾಗಿದೆ.
ವ್ಯಾನ್ನಲ್ಲಿ ಹತ್ತಕ್ಕೂ ಹೆಚ್ಚು ಮಕ್ಕಳಿದ್ದರು. ಚಾಲಕ ಹಾಗೂ ಓರ್ವ ಬಾಲಕಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕ ನಿಧಾನವಾಗಿ ವಾಹನ ಚಲಾಯಿಸುತ್ತಿದ್ದುದರಿಂದ ಅವಘಡ ತಪ್ಪಿದೆ ಎಂಬ ಮಾಹಿತಿ ದೊರೆತಿದೆ. ಸಾರ್ವಜನಿಕರು ಹಾಗೂ ಬನಶಂಕರಿ ಸಂಚಾರ ಪೊಲೀಸರು ಮಕ್ಕಳನ್ನು ರಕ್ಷಿಸಿ ಶಾಲೆಗೆ ಕಳುಹಿಸಿದ್ದಾರೆ. ಘಟನಾ ಸ್ಥಳದಿಂದ ವ್ಯಾನ್ ಸ್ಥಳಾಂತರಿಸಲಾಗಿದೆ. ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ(ಪ್ರತ್ಯೇಕ ಘಟನೆ):ಶಿವಮೊಗ್ಗ ಜಿಲ್ಲೆಯ ಜಾವಳ್ಳಿ ಗ್ರಾಮದ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ತಂದೆ, ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿತ್ತು. ಶಿವಮೊಗ್ಗದ ಇಲಿಯಾಜ್ ಬಡಾವಣೆಯ ನಿವಾಸಿಗಳಾದ ಅಲ್ತಾಫ್ (35) ಹಾಗೂ ಮದೀಯಾ(8) ಮೃತಪಟ್ಟವರು. ಶಿವಮೊಗ್ಗದಿಂದ ಚಿತ್ರದುರ್ಗದ ಕಡೆಗೆ ಡಸ್ಟರ್ ಕಾರಿನಲ್ಲಿ ಮೃತ ಅಲ್ತಾಫ್ ಮತ್ತು ಮಗಳು ಮದೀಯಾ ತೆರಳುತ್ತಿದ್ದರು. ಈ ವೇಳೆ ಹೊಳೆಹೊನ್ನೂರಿನಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಇನ್ನೊಂದು ಕಾರು ಎದುರಿನಿಂದ ಡಿಕ್ಕಿ ಹೊಡೆದಿತ್ತು. ಎರಡೂ ಕಾರುಗಳು ವೇಗವಾಗಿ ಚಲಿಸುತ್ತಿದ್ದರಿಂದ ಡಿಕ್ಕಿ ಹೊಡೆದ ರಭಸಕ್ಕೆ ಒಂದು ಕಾರು ರಸ್ತೆಯ ಬದಿಯ ಗುಂಡಿಗೆ ಇಳಿದಿತ್ತು. ಎರಡು ಕಾರಿನಲ್ಲಿ ಒಟ್ಟು ಎಂಟು ಜನ ಪ್ರಯಾಣ ಮಾಡುತ್ತಿದ್ದರು. ಈ ಪೈಕಿ ಇಬ್ಬರು ಮೃತಪಟ್ಟರೆ, ಆರು ಜನ ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ರಸ್ತೆ ನಿಂತಿದ್ದ ಕಾರ್ಮಿಕರಿಗೆ ಕಾರು ಡಿಕ್ಕಿ:ಆಗಸ್ಟ್ 31 ರಂದು ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಕರಾವಳಿ ಹೋಟೆಲ್ ಸಮೀಪ ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರು ಡಿಕ್ಕಿ ಹೊಡೆದು, ಮೂವರು ಸಾವನ್ನಪ್ಪಿರುವ ಘಟನೆ ಸಂಭವಿಸಿತ್ತು. ಹಾವೇರಿ ಜಿಲ್ಲೆಯ ಕಾಕೊಳ ತಾಂಡ ಗ್ರಾಮದ ನಿವಾಸಿಗಳಾದ ಚೆನ್ನಪ್ಪ, ರೇಖಪ್ಪ ಹಾಗು ಮಹಂತಪ್ಪ ಮೃತಪಟ್ಟ ಕಾರ್ಮಿಕರು. ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಾರು, ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಮೂವರಿಗೆ ಡಿಕ್ಕಿ ಹೊಡೆದಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಹುಲಿಯಪ್ಪ ಎಂಬವವರು ನೀಡಿದ ದೂರಿನ್ವಯ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ :ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: ತಂದೆ - ಮಗಳು ಸಾವು