ಬೆಂಗಳೂರು: ಕೈಗಾರಿಕಾ ಉದ್ದೇಶಗಳಿಗಾಗಿ ಕೆಐಎಡಿಬಿ ಮೂಲಕ ಪಡೆದ ಜಮೀನನ್ನು ಬಳಕೆ ಮಾಡದಿದ್ದರೆ 15 ದಿನಗಳಲ್ಲಿ ನೋಟಿಸ್ ನೀಡಲಾಗುವುದು. ಒಂದು ವೇಳೆ ಅನ್ಯ ಉದ್ದೇಶಕ್ಕಾಗಿ ಬಳಸಿದ್ದರೆ ಹಿಂಪಡೆಯಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಎಚ್ಚರಿಕೆ ನೀಡಿದರು.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವ ಉದ್ದೇಶಕ್ಕೆ ಜಮೀನು ಪಡೆಯಲಾಗಿತ್ತೋ ಅದಕ್ಕೆ ಬಳಸಬೇಕು. ಒಂದು ವೇಳೆ ಬಳಕೆ ಮಾಡದಿದ್ದರೆ, 15 ದಿನದೊಳಗೆ ನೋಟಿಸ್ ನೀಡುತ್ತೇವೆ. ಕಳೆದೊಂದು ವಾರದಿಂದ ಕೆಲವರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಆರಂಭವಾಗಿದೆ. 15 ದಿನದಲ್ಲಿ ಸಮರ್ಪಕ ಉತ್ತರ ಬಾರದಿದ್ದರೆ ಮತ್ತೊಂದು ನೋಟಿಸ್ ಕೊಡಲಾಗುವುದು. ಹಾಗೊಂದು ವೇಳೆ ಅದಕ್ಕೂ ಉತ್ತರ ನೀಡದಿದ್ದರೆ ನೀಡಿರುವ ಜಮೀನು ವಾಪಸ್ ಪಡೆಯಲಾಗುವುದು ಎಂದರು.