ಕರ್ನಾಟಕ

karnataka

ETV Bharat / state

ಶಕ್ತಿ ಯೋಜನೆ ಎಫೆಕ್ಟ್?: ಸಾರಿಗೆ ಇಲಾಖೆಯ ಪ್ರಮುಖ ಯೋಜನೆಗಳಿಗಿಲ್ಲ ಅನುದಾನ - ಬೆಂಗಳೂರು ನ್ಯೂಸ್​

ಶಕ್ತಿ ಯೋಜನೆಗೆ ಹಣ ಹೊಂದಿಸುವ ಅನಿವಾರ್ಯತೆಯಲ್ಲಿ ರಾಜ್ಯ ಸರ್ಕಾರ ಇತರ ಪ್ರಮುಖ ಜನೋಪಯೋಗಿ ಯೋಜನೆಗಳಿಗೆ ಆಗಸ್ಟ್​​ವರೆಗೂ ಅನುದಾನವನ್ನು ಬಿಡುಗಡೆ ಮಾಡಿಲ್ಲ.

Representative image
ಪ್ರಾತಿನಿಧಿಕ ಚಿತ್ರ

By ETV Bharat Karnataka Team

Published : Sep 20, 2023, 7:06 AM IST

Updated : Sep 20, 2023, 8:48 AM IST

ಬೆಂಗಳೂರು:ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಪೈಕಿ ಶಕ್ತಿ ಯೋಜನೆಯೂ ಒಂದು. ಸಾಮಾನ್ಯ ಸರ್ಕಾರಿ ಬಸ್​ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ ಯೋಜನೆ ಇದಾಗಿದೆ. ಈ ಯೋಜನೆಯ ಅನುಷ್ಠಾನದ ಉತ್ಸಾಹದಲ್ಲಿ ರಾಜ್ಯ ಸರ್ಕಾರ ಸಾರಿಗೆ ಇಲಾಖೆಯ ಇತರ ಪ್ರಮುಖ ಯೋಜನೆಗಳನ್ನು ನಿರ್ಲಕ್ಷಿಸಿದೆಯೇ? ಎಂಬ ಅನುಮಾನ ಮೂಡಿದೆ.

'ಶಕ್ತಿ ಯೋಜನೆ' ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ಬಳಿಕ ಅನುಷ್ಠಾನ ಮಾಡಿದ ಮೊದಲ ಗ್ಯಾರಂಟಿ ಯೋಜನೆ. 2023-24ರ ಸಾಲಿನಲ್ಲಿ ಮಹತ್ವಾಕಾಂಕ್ಷೆಯ ಈ ಗ್ಯಾರಂಟಿ ಯೋಜನೆಗೆ ಸಿದ್ದರಾಮಯ್ಯ ಸರ್ಕಾರ ಒಟ್ಟು 2,800 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ಜೂ.11ಕ್ಕೆ ಆರಂಭಿಸಿರುವ ಈ ಯೋಜನೆಗೆ ಆಗಸ್ಟ್‌ವರೆಗೆ ಸರ್ಕಾರ ಒಟ್ಟು 490.74 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ.

ಶಕ್ತಿ ಸಾರಿಗೆ ಇಲಾಖೆಯ ಆದ್ಯತೆಯ ಯೋಜನೆ. ಇದನ್ನು ಕೇಂದ್ರೀಕರಿಸಿ ಸಾರಿಗೆ ಇಲಾಖೆ ತನ್ನೆಲ್ಲಾ ಸಂಪನ್ಮೂಲವನ್ನು ಬಿಡುಗಡೆ ಮಾಡುತ್ತಿದೆ. ಆರ್ಥಿಕ ಸಂಕಷ್ಟದ ಮಧ್ಯೆ ಸಾರಿಗೆ ಇಲಾಖೆ ಶಕ್ತಿ ಯೋಜನೆಯನ್ನು ಅನುಷ್ಠಾನ ಮಾಡಿದೆ. ಆದರೆ, ಶಕ್ತಿಯ ಅಬ್ಬರದ ಮಧ್ಯೆ ಇಲಾಖೆಯ ಇತರ ಪ್ರಮುಖ ಯೋಜನೆಗಳು ನಿರ್ಲಕ್ಷ್ಯಕ್ಕೊಳಪಟ್ಟಿರುವುದು ಎದ್ದು ಕಾಣುತ್ತಿದೆ. ಈ ಯೋಜನೆಗೆ ಹಣ ಹೊಂದಿಸುವ ಅನಿವಾರ್ಯತೆಯಲ್ಲಿ ಇತರ ಪ್ರಮುಖ ಜನೋಪಯೋಗಿ ಯೋಜನೆಗಳಿಗೆ ಆಗಸ್ಟ್‌ವರೆಗೂ ಅನುದಾನವನ್ನು ಬಿಡುಗಡೆ ಮಾಡಿಲ್ಲ.

ಪ್ರಮುಖ ಯೋಜನೆಗಳಿಗೆ ಶೂನ್ಯ ಅನುದಾನ:ಆಗಸ್ಟ್‌ವರೆಗಿನ ಕೆಡಿಪಿ ಪ್ರಗತಿ ವರದಿ ಪ್ರಕಾರ, "ರಾಜ್ಯ ಸರ್ಕಾರ ಶಕ್ತಿ ಯೋಜನೆಗೆ ಹೆಚ್ಚಿನ ಆದ್ಯತೆ ನೀಡಿದೆ. ರಸ್ತೆ ಸಾರಿಗೆ ನಿಗಮಗಳ ಇತರ ಮಹತ್ವದ ಯೋಜನೆಗಳನ್ನು ಕಡೆಗಣಿಸಿರುವುದು ಸ್ಪಷ್ಟ. ಬಹುತೇಕ ಪ್ರಮುಖ ಜನೋಪಯೋಗಿ ಯೋಜನೆಗಳಿಗೆ ಸರ್ಕಾರ ಆರ್ಥಿಕ ವರ್ಷದ 5 ತಿಂಗಳು ಕಳೆದರೂ ಇನ್ನೂ ಹಣ ಬಿಡುಗಡೆ ಮಾಡಿಲ್ಲ‌. ಇದರ ಹಿಂದೆ ಹಣಕಾಸಿನ ಕೊರತೆ ಕಾರಣವೇ? ಎಂಬ ಅನುಮಾನ ಬಲವಾಗಿ ಮೂಡಿದೆ.

ಸಾರಿಗೆ ಇಲಾಖೆಗೆ 2023-24ರ ಸಾಲಿನಲ್ಲಿ ಒಟ್ಟು 4,961.95 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಈವರೆಗಿನ ಆರ್ಥಿಕ ಪ್ರಗತಿ ಕೇವಲ 6.61% ಮಾತ್ರ. ಸಾರಿಗೆ ಇಲಾಖೆಯಡಿ ಬರುವ ಪ್ರಮುಖ 12 ಯೋಜನೆ/ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರ ಈವರೆಗೂ ಅನುದಾನ ಬಿಡುಗಡೆ ಮಾಡಿಲ್ಲ. ಈ ಯೋಜನೆಗಳಿಗೆ ಇತ್ತ ಯಾವುದೇ ವೆಚ್ಚವನ್ನೂ ತೋರಿಸಿಲ್ಲ. ಕಳೆದ ಬಾರಿ ಸಾರಿಗೆ ಇಲಾಖೆ ಆಗಸ್ಟ್ ವೇಳೆಗೆ 14.23% ಪ್ರಗತಿ ಸಾಧಿಸಿತ್ತು. ಬಹುತೇಕ ಎಲ್ಲಾ ಪ್ರಮುಖ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಲಾಗಿತ್ತು. ಕಳೆದ ಬಾರಿ, 2022-23ರ ಸಾಲಿನಲ್ಲಿ ಆಗಸ್ಟ್ ವರೆಗೆ ಈ ಎಲ್ಲಾ ಉಚಿತ ಬಸ್ ಪಾಸ್ ಯೋಜನೆಗಳಿಗೆ ಸರಾಸರಿ 15% ವರೆಗೆ ಅನುದಾನ ಬಿಡುಗಡೆ ಮಾಡಲಾಗಿತ್ತು.

ಇದನ್ನೂ ಓದಿ:ಸಿದ್ದರಾಮಯ್ಯ ಸರ್ಕಾರದ 'ಶತಕ'ದಾಟ: ಗ್ಯಾರಂಟಿಗಳ ಜಾರಿಗೆ ಪಂಚ ಸವಾಲು

ಉಚಿತ ಬಸ್ ಪಾಸ್ ಯೋಜನೆಗೆ ಹಣ ಬಿಡುಗಡೆ ಇಲ್ಲ:ಕೆಡಿಪಿ ಪ್ರಗತಿ ವರದಿ ಪ್ರಕಾರ, ಆಗಸ್ಟ್‌ವರೆಗೆ ಸಾರಿಗೆ ನಿಗಮಗಳಲ್ಲಿ ಜಾರಿಯಲ್ಲಿರುವ ಇತರ ಪ್ರಮುಖ ಉಚಿತ ಬಸ್ ಪಾಸ್ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ. ಸ್ವಾತಂತ್ರ್ಯ ಹೋರಾಟಗಾರರ ಉಚಿತ ಬಸ್ ಪಾಸ್​ಗೆ 58 ಲಕ್ಷ ರೂ ಅನುದಾನ ಹಂಚಿಕೆ ಮಾಡಿದ್ದರೆ, ಅನುದಾನ ಬಿಡುಗಡೆ ಶೂನ್ಯ.‌ ಅಂಧ ಪ್ರಯಾಣಿಕರ ಉಚಿತ ಪ್ರಯಾಣಕ್ಕೆ 27.18 ಕೋಟಿ ರೂ. ಹಂಚಿಕೆ ಮಾಡಿದ್ದರೆ, ಈವರೆಗೆ ಹಣ ಬಿಡುಗಡೆ ಶೂನ್ಯ. ವಿಕಲಚೇತನರ ಉಚಿತ ಪ್ರಯಾಣಕ್ಕೆ 31.26 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದರೂ, ಆಗಸ್ಟ್‌ವರೆಗೆ ಅನುದಾನ ಬಿಡುಗಡೆ ಶೂನ್ಯ. ಇತ್ತ ಹಿರಿಯ ನಾಗರಿಕರಿಗೆ ನೀಡುವ ರಿಯಾಯಿತಿ ಬಸ್ ಪ್ರಯಾಣಕ್ಕಾಗಿ 48.56 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಆದರೆ ಈವರೆಗೆ ಅನುದಾನ ಕೊಟ್ಟಿಲ್ಲ.‌ ಅದೇ ರೀತಿ ಹುತಾತ್ಮ ಯೋಧರ ಮಕ್ಕಳ ಉಚಿತ ಪ್ರಯಾಣ ಹಾಗೂ ಎಂಡೋಸಲ್ಫಾನ್‌ಪೀಡಿತರ ಉಚಿತ ಪ್ರಯಾಣಕ್ಕೆ ಈವರೆಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ.

ಕೆಡಿಪಿ ಪ್ರಗತಿ ವರದಿ ಅಂಕಿಅಂಶದಂತೆ ಸಾರಿಗೆ ಇಲಾಖೆಯ ವಾಯು ಮಾಲಿನ್ಯ ನಿಯಂತ್ರಣ ಕ್ರಮಗಳ ಜಾರಿಗಾಗಿ 20 ಕೋಟಿ ಹಂಚಿಕೆ ಮಾಡಲಾಗಿದೆ. ಸಾರಿಗೆ ಕಲ್ಯಾಣ ಹಾಗೂ ರಸ್ತೆ ಸುರಕ್ಷತೆಗೆ 90 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಆಟೋ ಹಾಗೂ ಕ್ಯಾಬ್ ಡ್ರೈವರ್ ಮಕ್ಕಳ ಸ್ಕಾಲರ್ ಶಿಫ್​ಗಾಗಿ 17 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಆದರೆ ಆಗಸ್ಟ್ ವರೆಗೆ ಇದ್ಯಾವುದಕ್ಕೂ ಅನುದಾನ ಬಿಡುಗಡೆ ಮಾಡಿಲ್ಲ. ವಿಶೇಷ ಬಂಡವಾಳ ನೆರವಿನ ರೂಪದಲ್ಲಿ ಈ ಬಾರಿ 500 ಕೋಟಿ ಹಂಚಿದ್ದರೂ, ಈ ಪೈಕಿ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಕಳೆದ 2022-23ರ ಸಾಲಿನಲ್ಲಿ ಈ ಎಲ್ಲಾ ಪ್ರಮುಖ ಯೋಜನೆಗಳಿಗೆ ಈ ಅವಧಿಗೆ ಅನುದಾನ ಬಿಡುಗಡೆ ಮಾಡಲಾಗಿತ್ತು.

ಸಾರಿಗೆ ನಿಗಮಗಳಿಗೆ ಬಿಡುಗಡೆ ಮಾಡಿದ್ದೆಷ್ಟು?:ವಾಯುವ್ಯ ರಸ್ತೆ ಸಾರಿಗೆ ನಿಗಮಕ್ಕೆ ಈ ಬಾರಿ ಒಟ್ಟು 153.70 ಕೋಟಿ ರೂ. ಅನುದಾನ ಹಂಚಿಕೆಯಾಗಿದೆ. ಆಗಸ್ಟ್‌ವರೆಗೆ ಬಿಡುಗಡೆಯಾಗಿದ್ದು ಕೇವಲ 14.41 ಕೋಟಿ ರೂ. ಮಾತ್ರ. ಇನ್ನು ಕೆಎಸ್ಆರ್​ಟಿಸಿಗೆ ಒಟ್ಟು 229.67 ಕೋಟಿ ಹಂಚಿಕೆಯಾಗಿದ್ದರೆ, ಈವರೆಗೆ ಕೇವಲ 37.38 ಕೋಟಿ ರೂ. ಬಿಡುಗಡೆಯಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಈ ಬಾರಿ ಒಟ್ಟು 109.88 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಈ ಪೈಕಿ ಆಗಸ್ಟ್‌ ವರೆಗೆ ಕೇವಲ 22.74 ಕೋಟಿ ರೂ. ಮಾತ್ರ ಬಿಡುಗಡೆ ಮಾಡಲಾಗಿದೆ. ಬಿಎಂಟಿಸಿಗೆ ಒಟ್ಟು 717.2 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ಈ ಪೈಕಿ ಈವರೆಗೆ ಬಿಡುಗಡೆಯಾಗಿದ್ದು ಕೇವಲ 114.33 ಕೋಟಿ ರೂ.‌ ಮಾತ್ರ.

ಇದನ್ನೂ ಓದಿ:ಗ್ಯಾರಂಟಿ ಯೋಜನೆಗೆ 'SCSPTSP' ಅನುದಾನ ಬಳಕೆ: ಈವರೆಗೆ ಬಿಡುಗಡೆಯಾದ ಹಣ ಎಷ್ಟು?

Last Updated : Sep 20, 2023, 8:48 AM IST

ABOUT THE AUTHOR

...view details