ಬೆಂಗಳೂರು:ಆನ್ಲೈನ್ ಕ್ಲಾಸ್ಗಾಗಿ ಮಕ್ಕಳಿಗೆ ಮೊಬೈಲ್ ಕೊಡಿಸಿರುವ ಪೋಷಕರು ಜಾಗೃತರಾಗಿರಬೇಕು. ಯಾಕೆಂದರೆ ಬಾಲಕಿವೋರ್ವಳು ಇನ್‌ಸ್ಟಾಗ್ರಾಮ್ ಮೂಲಕ ಅಪರಿಚಿತ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿ, ಈಗ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಕಿಡಿಗೇಡಿವೋರ್ವ ಬಾಲಕಿಗೆ ಬ್ಲ್ಯಾಕ್ಮೇಲ್ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಸುಮಾರು 13 ವರ್ಷದ ಸಂತ್ರಸ್ತ ಬಾಲಕಿ ಆನ್ಲೈನ್ ಕ್ಲಾಸ್ಗಾಗಿ ತೆಗೆದುಕೊಂಡಿದ್ದ ಮೊಬೈಲ್ನಲ್ಲಿ ಇನ್‌ಸ್ಟಾಗ್ರಾಮ್ ಬಳಸುತ್ತಿದ್ದಳು. ಈಕೆಗೆ ಕೆಲ ತಿಂಗಳ ಹಿಂದೆ ಅಪರಿಚಿತ ವ್ಯಕ್ತಿಯ ಪರಿಚಯವಾಗಿ ಪ್ರತಿದಿನ ಚಾಟಿಂಗ್ ಮಾಡುತ್ತಿದ್ದ. ದಿನ ಕಳೆದಂತೆ ತನ್ನ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಬಾಲಕಿಗೆ ರವಾನಿಸಿ ವಿಕೃತಿ ಮೆರೆಯಲು ಶುರು ಮಾಡಿದ್ದಾನೆ. ಅಷ್ಟೇ ಅಲ್ಲದೆ ಬಾಲಕಿಗೂ ಆಕೆಯ ನಗ್ನ ಫೋಟೋ ಮತ್ತು ವಿಡಿಯೋಗಳನ್ನು ರವಾನಿಸುವಂತೆ ಸಂದೇಶ ಕಳುಹಿಸಿ ಬ್ಲ್ಯಾಕ್ಮೇಲ್ ಮಾಡಿದ್ದಾನೆ.
ಇದರಿಂದ ಗಾಬರಿಗೊಂಡ ಬಾಲಕಿ ಅಪರಿಚಿತ ಕಳುಹಿಸಿದ್ದ ನಗ್ನ ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದ್ದಳು. ಇದಾದ ಬಳಿಕವೂ ನಿರಂತರವಾಗಿ ಸಂದೇಶ ಕಳುಹಿಸಿ ನಗ್ನ ಫೋಟೋ ಕಳುಹಿಸುವಂತೆ ಬೆದರಿಕೆ ಹಾಕಿದ್ದಾನೆ. ಬಳಿಕ ಅಪರಿಚಿತನ ಇನ್‌ಸ್ಟಾಗ್ರಾಮ್ ಖಾತೆಯನ್ನು ರಿಪೋರ್ಟ್ ಮಾಡಿ ಬಾಲಕಿ ಪೋಷಕರು ಸುಮ್ಮನಾಗಿದ್ದರು. ಇಷ್ಟಕ್ಕೆ ಸುಮ್ಮನಾಗದ ವ್ಯಕ್ತಿ ಮತ್ತೊಂದು ನಕಲಿ ಖಾತೆ ಸೃಷ್ಟಿಸಿಕೊಂಡು ಲೈಂಗಿಕವಾಗಿ ಸಹಕರಿಸುವಂತೆ ಬಾಲಕಿಗೆ ಆಡಿಯೋ ಸಂದೇಶಗಳನ್ನು ಕಳುಹಿಸಿ ಒತ್ತಡ ಹಾಕಿದ್ದಾನೆ.
ಈ ವಿಚಾರ ತಿಳಿದ ಬಾಲಕಿ ಪೋಷಕರು, ಇಮೇಲ್ ಮೂಲಕ ದಕ್ಷಿಣ ವಿಭಾಗದ ಸಿಇಎನ್ ಠಾಣಾ ವ್ಯಾಪ್ತಿಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಕೊರೊನಾ ಸಂಬಂಧ ಮಕ್ಕಳಿಗೆ ಆನ್ಲೈನ್ ತರಗತಿಗಳು ಆರಂಭವಾಗಿವೆ. ಮಕ್ಕಳಿಗೆ ಪೋಷಕರು ಮೊಬೈಲ್ ಕೊಡಿಸುವುದು ಅನಿವಾರ್ಯವಾಗಿದೆ. ಆದರೆ ಮೊಬೈಲ್ನಲ್ಲಿ ತರಗತಿ ಕೇಳುವ ಜೊತೆಗೆ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಕೆಲ ಮಕ್ಕಳು ತೊಡಗಿಸಿಕೊಂಡಿದ್ದಾರೆ. ಪೋಷಕರು ತಮ್ಮ ಮಕ್ಕಳು ಮೊಬೈಲ್ ಬಳಸುವಾಗ ಒಂದೊಮ್ಮೆ ಗಮನ ಹರಿಸಬೇಕಿದೆ.