ಬೆಂಗಳೂರು:ಚುನಾವಣೆ ಹಿನ್ನೆಲೆ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನಂದಿನಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ರಾಜ್ಯಕ್ಕೆ ಅಮುಲ್ ಪ್ರವೇಶಿಸುತ್ತಿರುವ ಬಗ್ಗೆ ಪ್ರತಿಪಕ್ಷಳ ಆರೋಪಕ್ಕೆ ವಿಡಿಯೋ ಸಂದೇಶದ ಮೂಲಕ ಅವರು ಸ್ಪಷ್ಟನೆ ನೀಡಿದ್ದಾರೆ.
ಕೆಎಂಎಫ್ ಸಂಸ್ಥೆ ಹಾಗೂ ನಂದಿನಿ ಹಾಲನ್ನು ಬೇರೆಯವರಿಗೆ ಮಾರುತ್ತಿದ್ದಾರೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಕೇವಲ ರಾಜಕೀಯವಾಗಿದೆ. ಚುನಾವಣೆ ಹಿನ್ನೆಲೆ ರಾಜಕೀಯ ತಂತ್ರಗಾರಿಕೆಗಾಗಿ, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕೆಲವರು ರೈತರು ಹಾಗೂ ಜನರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಇದಕ್ಕೆ ನಮ್ಮ ರೈತರು ಹಾಗೂ ಸಹಕಾರ ಸಂಸ್ಥೆಯವರು ಕಿವಿಗೊಡಬಾರದು. ನಮ್ಮ ನಂದಿನಿ ಬೆಳೆಸುವಂಥ ಕೆಲಸವನ್ನು ಬಿಜೆಪಿ ನೇತೃತ್ವದ ಸರ್ಕಾರ ಮಾಡಲಿದೆ. ನಮ್ಮ ಹೆಮ್ಮೆಯ ಸಂಸ್ಥೆಯನ್ನು ಉಳಿಸುತ್ತೇವೆ ಮತ್ತು ಬೆಳೆಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.
ಕೆಎಂಎಫ್ ಬೆಳೆಸುವ ಸಂಕಲ್ಪ:ನಂದಿನಿ ನಮ್ಮ ಹೆಮ್ಮೆಯ ಸಂಸ್ಥೆ. ನಂದಿನಿ ಹಾಲು, ನಂದಿನಿ ತುಪ್ಪ, ನಂದಿನಿ ಸ್ವೀಟ್ಸ್, ನಂದಿನಿ ಬೆಣ್ಣೆಯನ್ನು ಎಲ್ಲಾ ಕನ್ನಡಿಗರು ಬಳಸುತ್ತಿದ್ದಾರೆ. ರಾಜ್ಯದ ರೈತರಿಂದ ತಯಾರಗುತ್ತಿರುವ, ರೈತರು ಅವರ ಅವರ ಮನೆಯಿಂದ ಹಸು ಮತ್ತು ಎಮ್ಮೆ ಹಾಲನ್ನು ಕಳಿಸಿ ಕೆಎಂಎಫ್ ಸಂಸ್ಥೆಯನ್ನು ಬೆಳೆಸಿದ್ದಾರೆ. ಅಮುಲ್ಗಿಂತ ಎತ್ತರದಲ್ಲಿ ಕೆಎಂಎಫ್ನ್ನು ಬೆಳೆಸಬೇಕು. ನಂದಿನಿ ಹಾಲನ್ನು ಇಡೀ ಪ್ರಪಂಚಕ್ಕೆ ಕೊಡಬೇಕು ಎಂಬುದು ನಮ್ಮ ಸದುದ್ದೇಶ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಟ್ಟಾಗಿ ಕೆಎಂಎಫ್ ಸಂಸ್ಥೆಯನ್ನು ಬೆಳೆಸುವ ಸಂಕಲ್ಪವನ್ನು ಮಾಡಿದ್ದೇವೆ. ನಮ್ಮ ರೈತರಿಗೆ ಆರ್ಥಿಕವಾಗಿ ಸಹಾಯವಾಗಬೇಕು. ಈ ಕಾರಣದಿಂದ ಕೆಎಂಎಫ್ ಸಂಸ್ಥೆಯನ್ನು ನಾವು ಬೆಳೆಸುತ್ತಿದ್ದೇವೆ. ಅಮುಲ್ಗಿಂತ ಎತ್ತರದಲ್ಲಿ ನಂದಿನಿ ಬೆಳೆಯಬೇಕು ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ಇದನ್ನೂ ಓದಿ: ನಂದಿನಿ ಬ್ರ್ಯಾಂಡ್ ಬೆಳೆಯಬೇಕು, ಅಮುಲ್ ಆನ್ಲೈನ್ ಖರೀದಿ ಜನರಿಗೆ ಬಿಟ್ಟದ್ದು: ಶೋಭಾ ಕರಂದ್ಲಾಜೆ