ಬೆಂಗಳೂರು: ಮುಂಬೈನಲ್ಲಿ ಬೀಡು ಬಿಟ್ಟಿರುವ ಬೆಂಗಳೂರಿನ ಕಾಂಗ್ರೆಸ್ ಅತೃಪ್ತ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯನವರ ಪರ ಬ್ಯಾಟಿಂಗ್ ಮಾಡುತ್ತಿದ್ದು, ಸಿದ್ದರಾಮಯ್ಯನವರನ್ನ ಮುಖ್ಯಮಂತ್ರಿ ಮಾಡಲು ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಪರ 'ಎಸ್ಬಿಎಂ' ಟೀಂ ಬ್ಯಾಟಿಂಗ್!? - kannadanews
ಕಾಂಗ್ರೆಸ್ನ ಅತೃಪ್ತ ಶಾಸಕರು ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಲು ಲಾಬಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷದ ಶಾಸಕ ಸ್ಥಾನಕ್ಕೆ ನೀಡಿದ ರಾಜೀನಾಮೆ ಹಿಂತೆಗೆದುಕೊಳ್ಳಲು ಅತೃಪ್ತರೆಲ್ಲರೂ ಸೇರಿ ದೋಸ್ತಿ ಸರ್ಕಾರದಲ್ಲಿ ಸಿದ್ದರಾಮಯ್ಯರನ್ನು ಸಿಎಂ ಮಾಡಲು ಎರಡೂ ಪಕ್ಷಗಳ ವರಿಷ್ಠರು ಒಪ್ಪುವಂತೆ ಒತ್ತಡ ಹಾಕಲು ಎಸ್ಬಿಎಂ ಶಾಸಕರು ಅತೃಪ್ತರನ್ನು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. ಮಂಬೈನ ಖಾಸಗಿ ಹೋಟೆಲ್ನಲ್ಲಿ ತಂಗಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ಮುಂದೆ ಈ ಪ್ರಸ್ತಾಪವನ್ನು ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್, ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜು ಇಟ್ಟಿದ್ದಾರೆನ್ನಲಾಗಿದೆ. ಬೆಂಗಳೂರಿನಲ್ಲಿ ತಂಗಿರುವ ಎಸ್ಬಿಎಂ ತಂಡದ ಮತ್ತೊಬ್ಬ ಶಾಸಕ ಮುನಿರತ್ನ ಸಹ ಸಿದ್ದು ಪರ ಶಾಸಕರನ್ನ ಸೆಳೆಯುತ್ತಿದ್ದಾರೆಂದು ಹೇಳಲಾಗುತ್ತಿದೆ.
ಮುಂಬೈ ಹೋಟೆಲ್ನಲ್ಲಿ ತಂಗಿರುವ ಹೆಚ್ಚಿನ ಶಾಸಕರು ಬಿಜೆಪಿಗೆ ಬೆಂಬಲ ನೀಡುವ ಒಲವನ್ನು ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ. ರಮೇಶ್ ಜಾರಕಿಹೊಳಿ, ಪ್ರತಾಪ್ ಗೌಡ ಪಾಟೀಲ್, ಮಹೇಶ್ ಕುಮಟಳ್ಳಿ ಅವರು ಬಿಜೆಪಿಗೆ ಸಹಕಾರ ನೀಡುವ ಅಭಿಲಾಷೆ ಹೊಂದಿದ್ದಾರೆಂದು ಹೇಳಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ರಾಜಕಾರಣದ ವಿರುದ್ಧವೇ ಸಿಡಿದು ಬಂದಿರುವ ವಿಶ್ವನಾಥ್ ಸಿದ್ದರಾಮಯ್ಯ ಸಿಎಂ ಆಗಲು ತಮ್ಮ ಬೆಂಬಲ ನೀಡಲು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ. ಸಿದ್ದರಾಮಯ್ಯ ಸಿಎಂ ಮಾಡಲು ಹೆಚ್ಚಿನ ಒಲವು ಮೂಡಿಬರದ ಕಾರಣ ಎಸ್ಬಿಎಂ ತಂಡದ ಪರ ಇರುವ ಶಾಸಕರು ಮುಂಬೈನಲ್ಲಿಯೇ ಇರುತ್ತಾರೋ ಅಥವಾ ಬೆಂಗಳೂರಿಗೆ ವಾಪಸ್ ಬರುತ್ತಾರಾ ಎನ್ನುವ ಪ್ರಶ್ನೆ ಕಾಡತೊಡಗಿದೆ.